ಸಾವಿರಾರು ವರ್ಷಗಳ ಹಿಂದೆ ಹುಟ್ಟಿದ ಯೋಗ ಕ್ಕೆ ಈಗ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಹತ್ವ ದೊರೆತಿದೆ. ಅದೇ ರೀತಿ ಯೋಗವನ್ನು ಪರಿಚಯಿಸಿದ ಹೆಗ್ಗಳಿಕೆ ಭಾರತಕ್ಕೆ ಸಲ್ಲುತ್ತದೆ. 10 ವರ್ಷಗಳ ಹಿಂದೆ ಅಂದರೆ 2014 ಡಿಸೆಂಬರ್ 11 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಬೇಕೆಂದು ತೀರ್ಮಾನಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನ ಆಚರಣೆಯನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಅದೇ ರೀತಿ ಇಂದು ದೇಶ- ವಿದೇಶಗಳಲ್ಲಿ ಮತ್ತು ರಾಜ್ಯದ ಶಿಕ್ಷಣ ಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳು, ಯೋಗ ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತವೆ. ಅದು ಅಲ್ಲದೆ ಈ ದಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಯೋಗ ದಿನಾಚರಣೆಯನ್ನು ಮಾಡಬೇಕೆಂದು ಪ್ರೋಟೋಕಾಲ್ ಮೂಲಕ ಶಿಕ್ಷಣ ಇಲಾಖೆ ಆದೇಶಿಸಿದೆ.
ಬೆಳಗಾವಿ: ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಶಿಕ್ಷಣ ಸಮಿತಿಯ ಶಾಲೆಗಳಲ್ಲಿ ಕೂಡ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅದೇ ರೀತಿ ಆದರ್ಶ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಖಾಯಂ ಅಧ್ಯಕ್ಷರು ಹಾಗೂ ಶ್ರೀ ಕಾಡಸಿದ್ದೇಶ್ವರ ಮಠದ ಪೀಠಾಧಿಕಾರಿಗಳಾದ ಶ್ರೀ ಡಾ. ಪವಾಡೇಶ್ವರ ಮಹಾಸ್ವಾಮಿಗಳು ನಂತರ ವಿದ್ಯಾರ್ಥಿಗಳ ಜೊತೆಗೆ ತಾವು ಕೂಡ ಯೋಗ ಮಾಡುವುದರ ಮೂಲಕ ಈ ದಿನ ಎಲ್ಲರಿಗೂ ಮಾದರಿಯಾದರು, ಅದೇ ರೀತಿ ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವು ವೃದ್ಧಿಯಾಗುತ್ತದೆ. ರೋಗಕ್ಕೆ ಯೋಗವೇ ಮದ್ದು ಎಂಬಂತೆ ಎಲ್ಲರೂ ಕೂಡ ಪ್ರತಿನಿತ್ಯ ಯೋಗ ಮಾಡಿದರೆ ಮಾತ್ರ ರೋಗವನ್ನು ದೂರ ಮಾಡಲಾಗುವುದು ಹಾಗೇ ಯೋಗದಿಂದ ದೇಹದ ಸಮತೋಲನೆಯನ್ನು ಕಾಪಾಡಿಕೊಳ್ಳಬಹುದು ಹಾಗೂ ಮಾನಸಿಕ ಒತ್ತಡವನ್ನು ಕೂಡ ನಿಯಂತ್ರಿಸಬಹುದು ಎಂದು ತಿಳಿ ಹೇಳಿದರು.
ಸ್ವಾಮೀಜಿಯವರು ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಕೂಡ ಯೋಗವನ್ನು ಮಾಡಿದ್ದರಿಂದ ವಿದ್ಯಾರ್ಥಿಗಳು ಉತ್ಸಾಹಬರಿತರಾದರು. ಅದು ಅಲ್ಲದೆ ಶಾಲೆಯ ಸಮಸ್ತ ಶಿಕ್ಷಕ ವೃಂದ ಹಾಗೂ ಮುಖ್ಯೋಪಾಧ್ಯಯರು ಕೂಡ ವಿದ್ಯಾರ್ಥಿಗಳೊಂದಿಗೆ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಾಗೂ ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಕರಾದ ಎಸ್ ಎ ನಾಯಿಕ ಹಾಗೂ ಯಮನಪ್ಪ ಹಂದ್ಯಾಗೋಳ ಇವರ ಮಾರ್ಗದರ್ಶನದಲ್ಲಿ ಯೋಗ ದಿನಾಚರಣೆಯನ್ನು ಅರ್ಥಬದ್ಧವಾಗಿ ಆಚರಣೆ ಮಾಡಲಾಯಿತು. ವಿದ್ಯಾರ್ಥಿಗಳಿಗೂ ಕೂಡ ಯೋಗದ ಕುರಿತು ತಿಳಿ ಹೇಳಲಾಯಿತು.