ಏ ಚಿಗವ್ವ ಆ ತಾಯವ್ವನ ಮಗಳು ಸತ್ಯವ್ವ ತೀರಕೊಂಡ್ಲಂತ ನೋಡು ಪಾಪ…ಅಂದು ಪಾಂಡುರಂಗ.. ಅಯ್ಯೋ ಶಿವನ ಏನಾಗಿತ್ತೋ ತಮ್ಮ ಪಾಪ ಹೆಂಥಾ ಚಂದ್ ನಕ್ಕೋಂತ ಇತ್ತ ಆ ಹುಡುಗಿ ಹಿರಿಯಾರ ಅಂದ್ರ ಎಷ್ಟ ಮರ್ಯಾದಿ ಎಷ್ಟ ಕಿಮ್ಮತ್ ಕೊಡತಿತ್ತು ಪಾಪ…
ಏನ್ ಹೇಳುದ್ ಬಿಡಬೇ ಗಂಡನ ಮನಿಯವ್ರು ಬಡದ ಹಾಕ್ಯಾರ ಅಂತ ಸಂಗಪ್ಪಜ್ಜ ಹೇಳಾತಿದ್ದ…
ಅಲ್ಲೋ ರಾಮ್ಯಾ ಆ ಸುಂದರವ್ವನ ಗಂಡ ಸರ್ಕಾರಿ ನೌಕರ‌್ಯಾಗ ಅದಾನ ಅಂತ ಕೇಳಿದ್ದೆಲ್ಲ ಕೊಟ್ಟು ಮದ್ವಿ ಮಾಡಿದ್ರು ಎರಡ್ ಬಂಗಾರದಂತ ಮಕ್ಕಳೂ ಇದ್ದು ಆದ್ರೂ ಸುಂದ್ರವ್ವ ತವರು ಮನಿಗಿ ಬಂದಾಗೊಮ್ಮಿ ಅಕಿ ಮಾರೀನ ಸಪ್ಪಗ್ ಇರತಿತ್ತು ಈಗ ನೋಡಿದ್ರ ಮಕ್ಕಳ ಸಮೇತ ಬಾಂವಿಗಿ ಬಿದ್ದಾಳಂತ ಏನ ಆಗಿತ್ತೊ ಎನೋ ಆ ಓಣ್ಯಾನವ್ರ ಮಾತಾಡೂದ ಕೇಳಿನಿ ಮನ್ಯಾಗ ದಿನ್ನ ಜಗಳಾಡ್ತೀರ ಅಂತ.
ಹೀಗೆ ಒಂದಲ್ಲ ಎರಡಲ್ಲ ಆಗಾಗ ಸಾವಿಗೆ ಶರಣಾದ ಮತ್ತು ಹತ್ಯೆಯಾದ ಹೆಣ್ಣುಮಕ್ಕಳ ಸುದ್ದಿಗಳು ಕಿವಿಗಳಿಗೆ ಅಪ್ಪಳಿಸುತ್ತಲೇ ಇರುತ್ತವೆ.
ಹೀಗೆ ಗಂಡನ ಮನೆಯವರ ಕಿರುಕುಳ,ಮತ್ತು ತವರು ಮನೆಯವರ ಅಸಹಾಯಕತೆಯ ನಡುವೆ ದುಡಿದು ದಣಿದು ಸಂಸಾರದ ಬಂಡಿ ಎಳೆಯಲು ಶ್ರಮಿಸಿ ಹೈರಾಣಾಗುವ ಅದೆಷ್ಟೋ ಹೆಣ್ಣು ಜೀವಗಳು ಈ ಲೋಕದಿಂದ ಮರಳಿ ಬಾರದ ಲೋಕಕ್ಕೆ ಎದ್ದುಹೋಗುವದು ಕೇವಲ ವರದಕ್ಷಿಣೆ ಅನ್ನುವ ಪಿಡುಗಿಗೆ ಬಲಿಯಾಗಿ ಅನ್ನುವದು ದುರಂತದಲ್ಲಿ ವಿಷಯ.
ಆಗಷ್ಟೇ ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಣುಮಗಳೊಬ್ಬಳು ಕೆಲವೇ ತಿಂಗಳುಗಳ ಅಂತರದಲ್ಲಿ ಹಗ್ಗದ ಕುಣಿಕೆಗೆ ಕೊರಳು ಒಡ್ಡಿಯೋ,ತೋಟದ ಮನೆಯ ಬಾವಿಯ ನೀರಿಗೆ ಧುಮುಕಿಯೋ,ತನ್ನದೇ ಮನೆಯ ಸೀಲಿಂಗ್ ಫ್ಯಾನಿಗೋ ವೇಲು ಬಿಗಿದುಕೊಂಡೋ ಆತ್ಮಹತ್ಯೆಗೆ ಶರಣಾಗುವದು ಒಂದು ಕಡೆಯಾದರೆ ಅತ್ತೆ,ಮಾವ,ಮೈದುನ,ನಾದಿನಿ ಮತ್ತು ಗಂಡ ಕೊಡುವ ವರದಕ್ಷಿಣೆಯ ಕಿರುಕುಳ ಅದೆಷ್ಟೋ ಅಮಾಯಕ ಮತ್ತು ಮುಗ್ಧ ಹೆಣ್ಣುಮಕ್ಕಳ ಜೀವವನ್ನೆ ಬಲಿ ಪಡೆದಿವೆ ಆದರೂ ನ್ಯಾಯಾಲಯಗಳಲ್ಲಿ ಇಂತಹ ಅದೆಷ್ಟೋ ಪ್ರಕರಣಗಳೇ ಬಿದ್ದು ಹೋಗಿ ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಆರೋಪಿಗಳು ಖುಲಾಸೆ ಆಗುವದು ಕೂಡ ಸಾಮಾನ್ಯ ಸಂಗತಿ ಎಂಬಂತೆ ಆಗಿಬಿಟ್ಟಿದೆ.
ಬಡವರ ಮನೆಯಲ್ಲಿ ಹೆಣ್ಣು ಹುಟ್ಟಿದರೆ ಹುನ್ನು ಅನ್ನುವ ಮಾತು ಈಗಲೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಜನ ಜನಿತವಾಗಿರುವ ಕಾಲ ಇದು ಅನ್ನುವದು ಇಡೀ ಮನುಕುಲಕ್ಕೆ ಅಂಟಿದ ಕಳಂಕ ಅಂದರೂ ತಪ್ಪಾಗಲಿಕ್ಕಿಲ್ಲ.
ಸಾವು ನೋವು ಮತ್ತು ಬದುಕು ತುಟ್ಟಿಯಾದ ಈ ದಿನಗಳಲ್ಲಿ ಗುರುರಾಜ ಹೊಸಕೋಟಿ ಅವರ ನನ್ನ ಕರುಳಿನ ಕುಡಿ ನೀನು ಹಿಂಗ ಅಳಕೋತ ಕುಂತ್ಯಾಕ?? ಅನ್ನುವ ಜನಪದ ಹಾಡು ಕೇಳುವ ಕಿವಿಗಳಿಗೂ ಈಗೀಗ ಬರ ಬಿದ್ದಿರುವದು ವಿಪರ್ಯಾಸವೇ ಸರಿ.
ಮನೆಗೆ ಮಹಾಲಕ್ಷ್ಮಿಯಂತೆ ಬಂದ ಸೊಸೆಯೊಬ್ಬಳು ತನ್ನ ಅಪ್ಪ,ಅಮ್ಮ,ಅಕ್ಕ ತಂಗಿ,ಅಣ್ಣ,ತಮ್ಮ ಹೀಗೆ ಇಡೀ ಕುಟುಂಬವನ್ನು ಬಿಟ್ಟು ಮತ್ತೊಂದು ಮನೆಯ ಅಪರಿಚಿತ ಸದಸ್ಯರನ್ನೇ ತನ್ನ ಕುಟುಂಬದ ಸದಸ್ಯರೆಂದು ನಂಬಿ ಬಂದರೂ ಅವರ ಬದುಕು ವರದಕ್ಷಿಣೆಯ ಕಿರುಕುಳದಿಂದಾಗಿ ಬಾಣಲೆಯಿಂದ ಬೆಂಕಿಗೆ ಬಿದ್ದು ಚಡಪಡಿಬೇಕಾದ ಪರಿಸ್ಥಿತಿಗಳು ನಿರ್ಮಾಣವಾಗುವದಕ್ಕೆ ಕಾರಣ ನಮ್ಮಲ್ಲಿ ಇರುವ ಸಡಿಲವಾದ ಕಾನೂನು ಅಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ.
ವರದಕ್ಷಿಣೆಯನ್ನು ಕೇಳಿ ಪಡೆದರೆ ಅಪರಾಧ ಅನ್ನುವ ಕಾನೂನು ವರದಕ್ಷಿಣೆ ಕೊಡುವದು ಕೂಡ ಅಪರಾಧ ಅಂತ ಖಡಕ್ಕಾಗಿ ಹೇಳಿದಾಗ ಮಾತ್ರ 1961 ರ ವರದಕ್ಷಿಣೆ ನಿಷೇಧ ಕಾನೂನಿಗೆ ಪೂರ್ಣವಾದ ಬಹುಮತ ಸಿಗಲಿದೆ ಅನ್ನುವದು ನನ್ನ ಅಭಿಪ್ರಾಯ.
ಹಣದ ವ್ಯಾಮೋಹಕ್ಕೆ ಸಿಲುಕಿದ ಮನುಷ್ಯ ರೂಪದ ಅದೆಷ್ಟೋ ರಕ್ಕಸರು ತಮ್ಮ ಮನೆಗಳಲ್ಲಿ ಮಾಡುವ ವಿನಾಕಾರಣದ ವಾದ ವಿವಾದಗಳೇ ಬಹಳಷ್ಟು ಸಲ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದ್ದು ಕೊಡಲಿ,ಕುಡಗೋಲಿನಿಂದ ಬರ್ಭರವಾಗಿ ಕೊಚ್ಚಿಯೋ ತಲೆಯ ಮೇಲೆ ಚಪ್ಪಡಿ ಕಲ್ಲು ಹಾಕಿಯೋ ಜೀವವೊಂದನ ಬಲಿ ಪಡೆಯುವಷ್ಟು ಮನುಷ್ಯ ಹೀನ ಕೃತ್ಯಗಳಿಗೆ ಇಳಿಯುತ್ತಿರುವದರ ಹಿಂದೆ ಕಾನೂನಿನ ಅರಿವು ಇಲ್ಲದೆ ಇರುವದು ಮತ್ತು ಏನು ಮಾಡಿದರೂ ಜಾಮೀನಿನ ಮೇಲೆ ಕೆಲ ದಿನಗಳಲ್ಲೆ ಹೊರಗೆ ಬರ್ತೀವಿ ಅನ್ನುವ ಭಂಢದೈರ್ಯ ಅಂತಹ ಕೃತ್ಯಗಳ ಹಿಂದೆ ಕೆಲಸ ಮಾಡುತ್ತಿರುವದು ಕೂಡ ಬದುಕಿ ಬಾಳ ಬೇಕಾದ ಅದೆಷ್ಟೋ ಅಮಾಯಕ ಜೀವಗಳ ಸಾವು ನೋವುಗಳಿಗೆ ಕಾರಣವಾಗುತ್ತಿದೆ.
ಈ ಬಾರಿ ತವರು ಮನೆಗೆ ಹೋದಾಗ ತಪ್ಪದೇ ಇಷ್ಟು ಹಣ ತೆಗೆದುಕೊಂಡು ಬರಬೇಕು,ಈ ತಿಂಗಳು ಚಿನ್ನದ ಒಡವೆ ತರದೆ ಇದ್ದರೆ ತವರಿನಿಂದ ವಾಪಸು ಬರೋದೆ ಬೇಡ ಅನ್ನುವ ಗಂಡನ ಮನೆಯವರ ಕಠೋರವಾದ ಮಾತುಗಳೇ ಬಹಳಷ್ಟು ಸಲ ನುಂಗಲಾರದ ತುತ್ತಾಗಿ ಪರಿಣಮಿಸಿ ತ
ಇನ್ನೂ ಈ ಲೋಕದ ಮರ್ಮವನ್ನೇ ಸರಿಯಾಗಿ ಅರಿಯದ ಮುಗ್ಧ ಕಂದಮ್ಮಗಳೊಂದಿಗೆ ಜೀವ ಬಿಡುವ ಪ್ರಸಂಗಗಳು ಅದೆಷ್ಟೋ ಗೃಹಿಣಿಯರಿಗೆ ಅನಿವಾರ್ಯವಾಗಿ ಬಿಡುತ್ತವೆ.
ಗಂಡಸಿಗೆ ಸರಿ ಸಮನಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಹಗಲು ರಾತ್ರಿ ಆದಿಯಾಗಿ ದುಡಿಯುವ ಅವಕಾಶ ಇರುವ ಹೆಣ್ಣುಮಕ್ಕಳು ತಾವು ಯಾವುದರಲ್ಲೂ ಕಮ್ಮಿ ಇಲ್ಲ ಅನ್ನುವ ಆತ್ಮಸ್ಥೈರ್ಯವನ್ನ ಬೆಳೆಸಿಕೊಳ್ಳುವದರ ಜೊತೆಗೆ ಸ್ವಾವಲಂಬಿ ಬದುಕಿನತ್ತ ಮುಕ್ತವಾಗಿ ತೆರದುಕೊಳ್ಳಬೇಕಿರುವದು ಕೂಡ ಅಷ್ಟೇ ಅತ್ಯಗತ್ಯವಾಗಿದೆ.
ಇನ್ನುಳಿದಂತೆ ಸರಳ ವಿವಾಹಗಳಿಗೆ ಪ್ರೋತ್ಸಾಹ ಎಲ್ಲರೂ ನೀಡಬೇಕಾಗಿದ್ದು ವಧು ದಕ್ಷಿಣೆ ವರ ದಕ್ಷಿಣೆಯಂತಹ ಹೀನ ಪದ್ಧತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂತ್ರ ಮಾಂಗಲ್ಯ,ಯಾದಿಮೆ ಶಾದಿ,ಸಾಮುಹಿಕ ವಿವಾಹ,ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ಸೇರಿದಂತೆ ಸರಳ ಜೀವನ ಪದ್ಧತಿಯ ಬಗ್ಗೆ ಸಾಮಾಜಿಕ ಸಂಘಟನೆಗಳು ಹೆಚ್ಚು ಕಾಳಜಿ ತೋರಿಸುವದರ ಜೊತೆಗೆ ಆದರ್ಶಗಳು ಕೇವಲ ಉಳ್ಳವರ ಭಾಷಣದ ವಸ್ತುಗಳಾಗದೇ ಆಚರಣೆಯ ಮೂಲಕ ಅಸ್ಥಿತ್ವಕ್ಕೆ ಬಂದಾಗ ಮತ್ತು ತಮ್ಮ ಮನೆಗೆ ಬಂದ ಹೆಣ್ಣುಮಗಳು ತಮ್ಮದೆ ಅಕ್ಕ ತಂಗಿ ಅಥವಾ ಮಗಳು ಅಂತ ಅವರೊಂದಿಗೆ ಭಾಂಧವ್ಯ ಬೆಳೆಸುವ ಮನಸ್ಥಿತಿಗಳು ಎಲ್ಲ ಮನೆಗಳಲ್ಲೂ ಮೂಡಿ ಬರಬೇಕಿದೆ.
ಇದೆಲ್ಲಕ್ಕಿಂತ ಮಿಗಿಲಾಗಿ ಮನುಷ್ಯನೊಬ್ಬ ಮತ್ತೊಬ್ಬ ಮನುಷ್ಯನನ್ನು ಅವನ ಆಸ್ತಿ, ಅಂತಸ್ತು,ಹುದ್ದೆ ಪದವಿ,ಅಥವಾ ಅವರು ಹುಟ್ಟಿ ಬೆಳೆದ ಪರಿಸರದ ಆಧಾರದಲ್ಲಿ ಗೌರವಿಸದೇ ಪ್ರತಿಯೊಬ್ಬರನ್ನು ಮನುಷ್ಯರಂತೆ ಕಾಣುವ ಮೂಲಕ ಸಹಜವಾದ ನಗು ಮತ್ತು ನಿಷ್ಕಲ್ಮಶವಾದ ಪ್ರೀತಿ ಈ ಜಗವನ್ನು ಆಳಬೇಕಾದರೆ ಹಣ ದಾಹಕ್ಕಾಗಿ ನಡೆಯುವ ನೇರ ಮತ್ತು ಪರೋಕ್ಷ ಕೊಲೆಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಕಾನೂನಿನ ಜಾಗೃತಿ ಮೂಡಿಸಬೇಕಾಗಿದೆ
ಖರೇ ಹೇಳ್ರಿ ನಿಮ್ಮ ಮಗಳಿಗೆ ಏನಾಗಿತ್ತು ಗಂಡನ ಮನಿಯವ್ರ ಕಿರುಕುಳ ಇತ್ತಂತ…?ಅವ್ರ ಅತ್ತಿ ಕೆಟ್ಟ ಆಸಬುರಕ ಹೆಂಗಸ ಅಂತ ? ಮತ್ತ ಗಂಡ ದಿನ್ನಾ ಕುಡದ ಬಂದು ದನಕ್ ಬಡದಂಗ ಬಡಿತಿದ್ದ ಅಂತ ಹೌದೋ ಇಲ್ಲೋ?? ಅನ್ನುವ ತಹಶಿಲ್ದಾರ,ಸಿಡಿಪಿಓ ಮತ್ತು ಮ್ಯಾಜಿಸ್ಟ್ರೇಟರ ಎದುರು ನಿಲ್ಲುವ ಅದೆಷ್ಟೋ ಜನ ತಂದೆ ತಾಯಿ ಅಥವಾ ಬಲಿ ಪಶುವಾದ ಹೆಣ್ಣುಮಕ್ಕಳ ಪೋಷಕರು ಇಲ್ರಿ ಸಾಹೇಬ್ರ ಹಂತಾದ್ದೇನಿಲ್ಲ ಅಕಿಗಿ ಹೊಟ್ಟಿ ನೂವ್ ಇತ್ರಿ ಅದಕ್ ಹಿಂಗ್ ಮಾಡಕೊಂಡಾಳು,ಯಾಕೋ ಗೊತ್ತಿಲರಿ ಈಗ್ ಎರಡ್ಮೂರ ತಿಂಗಳಿಂದ ಅಕಿ ಮಾನಸಿಕ ಆಗಿದ್ದಳರಿ ಅಕಿ ತಲಿನ ಸರಿ ಇರಲಿಲ್ಲ ಸಾಹೇಬ್ರ ಅಂತ ಕೊಲೆಯಾದ ಅಥವಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ತವರು ಮನೆಯವರೇ ಕೆಲವೊಮ್ಮೆ ಕೋರ್ಟು ಕಚೇರಿ ಅಂತ ಅಲೆಯಲಾಗದ ಅಸಹಾಯಕತೆಯಿಂದ ದೂರು ನೀಡದೆ ಉಳಿಯುವದು,ಮತ್ತಹ ಸತ್ಯವನ್ನು ಬಚ್ಚಿಟ್ಟು ಸುಳ್ಳನ್ನೆ ಸತ್ಯದ ತಲೆಯ ಮೇಲೆ ಹೊಡೆದಂತೆ ಸಾಕ್ಷಿ ಹೇಳುವದು ಹಾಗೂ ಆದದ್ದು ಆಗಿ ಹೋತು ಇನ್ನೇನ್ ಮಾಡೂದೈತಿ ಅವ್ರೇನ್ ಕೊಡ್ತಾರೋ ತಗೊಂಡು ವ್ಯವಹಾರ ಮುಗಸ್ರಿ ಅಂತ ಸತ್ತವರ ಶವದ ಪಕ್ಕದಲ್ಲೇ ಕುಳಿತು ಸಾವಿನ ಸೂತಕದ ಮನೆಯಲ್ಲೂ ಅವರ ಬಂಧುಗಳ ಕಿವಿ ಕಚ್ಚುವ ಅದೆಷ್ಟೋ ಹಿರಿಯರ ನಡುವಿನಿಂದ ಎದ್ದು ವರದಕ್ಷಿಣೆ ನಿಷೇಧದ ಕುರಿತು ಎಲ್ಲ ಯುವಕ ಯುವತಿಯರು ಧ್ವನಿ ಎತ್ತಿದಾಗ ಮಾತ್ರ ವರದಕ್ಷಿಣೆ ನಿಷೇಧ ಆಗುವ ಮೂಲಕ ಈ ಸಮಾಜದ ದೊಡ್ಡ ಪಿಡುಗೊಂದು ಕೊನೆಯಾಗಲಿದೆ.
ಬನ್ನಿ ಎಲ್ಲರೂ ಒಂದಾಗಿ ವರದಕ್ಷಿಣೆಯ ಪಿಡುಗಿಗೆ ಅಂತ್ಯ ಹಾಡೋಣ..
ಬರಹ: ದೀಪಕ ಶಿಂಧೆ
ಪ್ರಜಾ ಟಿವಿ ವರದಿಗಾರರು( ಚಿಕ್ಕೋಡಿ)