ಮತದಾನ ನಮ್ಮೆಲ್ಲರ ಹಕ್ಕು ತಪ್ಪದೆ ಮತ ಚಲಾಯಿಸೋನ
ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯವಾಗಿದೆ. ಮತದಾನ ಮಾಡಲು ಭಾರತೀಯ ಪ್ರಜೆ 18 ವಯಸ್ಸು ಆಗಿರಬೇಕೆಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಭಾರತ ಸುಸಂಸ್ಕೃತ ನಾಡಾಗಿದ್ದು ಇಲ್ಲಿನ ಆಚಾರ ವಿಚಾರ ಇದೆಲ್ಲವೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ ಅಂತೇ ಇಲ್ಲಿ ಅಕ್ಷರಸ್ಥರು ಹಾಗೂ ಅನಕ್ಷರಸ್ಥರು ಕೂಡ ಇದ್ದಾರೆ. ಅನಕ್ಷರಸ್ಥರಲ್ಲಿ ಇದ್ದಂತ ದೇಶಪ್ರೇಮವಾಗಲಿ ಮತದಾನದ ಬಗ್ಗೆ ಇರುವ ಕಾಳಜಿಯಾಗಲಿ ಅಕ್ಷರಸ್ಥರಲ್ಲಿ ಇಲ್ಲ ಏಕೆಂದರೆ ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಥಮ ಹಂತದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಜನತೆ ಶೇಕಡ 40 ರಿಂದ 45 % ಅಷ್ಟೇ ಜನ ಮತವನ್ನ ಚಲಾವಣೆ ಮಾಡಿದ್ದಾರೆ ಉಳಿದ ಜನರಿಗೆ ಚುನಾವಣೆ ಬೇಡವಾಯಿತೆ? ಅಥವಾ ಯಾರಿಗೆ ಮತ ಹಾಕಿ ಏನು ಪ್ರಯೋಜನ ಎಂಬ ತಾತ್ಸಾರ ಮನೋಭಾವನೆ ಉಂಟಾಯಿತೆ? ಯಾರು ಸೂಕ್ತ ಅಭ್ಯರ್ಥಿಯು ಇಲ್ಲದಂತಾಯಿತೆ? ಇವೆಲ್ಲ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಕಾಡತೊಡಗಿದೆ.
ವಿದ್ಯಾವಂತ ಜನರೆ ಮತದಾನವೆಂಬ ಹಬ್ಬದಿಂದ ದೂರ ಉಳಿದರೆ ಯೋಗ್ಯ ನಾಯಕನನ್ನ ಆರಿಸುವುದಾದರೂ ಹೇಗೆ?
ನಮ್ಮ ಜನರಲ್ಲಿ ಮತದಾನದ ಜಾಗೃತಿಯ ಅರಿವನ್ನ ಮೂಡಿಸಬೇಕಾಗಿದೆ. ಬದುಕಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ, ದೇಹದಾನ ಇವುಗಳಲ್ಲದೆ ಶ್ರೇಷ್ಠವಾದ ದಾನ ಮತದಾನವಾಗಿದೆ. ಏಕೆಂದರೆ ಮತದಾನದಿಂದ ಒಂದು ಸುಂದರವಾದ ಭವಿಷ್ಯ ನಿರ್ಮಾಣಕ್ಕೆ ಸಹಾಯಕವಾಗುವುದು ಪೂರ್ವ ಮತದಾರ ಮನಸ್ಸು ಮಾಡಿದರೆ ಸಾಮಾನ್ಯ ವ್ಯಕ್ತಿಯು ಕೂಡ ಅಧಿಕಾರವನ್ನು ಪಡೆಯಬಹುದಾದ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಈಗಾಗಲೇ ಚುನಾವಣಾ ಆಯೋಗವು ವಿ ವಿ ಪ್ಯಾಡ್ ಗಳ ಬಗ್ಗೆ ಅರಿವನ್ನ ಮೂಡಿಸಿದ್ದಾರೆ ಸಾಕಷ್ಟು ಜನರಲ್ಲಿ ಇದ್ದಂತ ಗೊಂದಲವನ್ನು ಕೂಡ ಪರಿಹಾರ ಮಾಡಿದ್ದಾರೆ ಯಾವ ವ್ಯಕ್ತಿಯನ್ನು ನಾವು ಆರಿಸಿ ಕಳಿಸಿದರೆ ದೇಶ ಉದ್ದಾರವಾಗುತ್ತದೆ ಎಂಬ ತಿಳುವಳಿಕೆಯು ಎಲ್ಲ ಜನರಲ್ಲಿದೆ.
ಚುನಾವಣಾ ಪ್ರಚಾರದ ಭರಾಟೆಯಲ್ಲಿ ಅಹಿತಕರವಾದ ಘಟನೆಯನ್ನು ಸೃಷ್ಟಿಸಿ ಅಮೂಲ್ಯವಾದ ಸ್ನೇಹ ಸಂಬಂಧಗಳನ್ನು ಹಾಳು ಮಾಡಿಕೊಳ್ಳದಿರಿ. ಮೇ 07 ರಂದು ನಡೆಯುವ ದ್ವಿತೀಯ ಹಂತದ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡೋಣ ಮತದಾನ ನಮ್ಮೆಲ್ಲರ ಜವಾಬ್ದಾರಿ ಎಂದು ಸಾರೋಣ.
ಬರಹ: ಶಿವಾನಂದ ತೋರಣಗಟ್ಟಿ
ಶಿಕ್ಷಕರು