ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಿಂದ ಬೆಳಗಾವಿ ವಿಭಾಗದ ಬಾಗಲಕೋಟೆ ತಂಡ ಅನರ್ಹ.

ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಅನರ್ಹವಾದ ಬೆಳಗಾವಿ ವಿಭಾಗದ ಬಾಲಕರ ತಂಡ

ಚಿಕ್ಕಮಗಳೂರು ಅ.22: ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಸಂಘಟಿಸಿದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯು ದಿ. 18/10/2024 ರಿಂದ 19/10/2024 ರ ವರೆಗೆ ಕಡೂರು ಡಾ! ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ ಪಂದ್ಯಾವಳಿಯಲ್ಲಿ ರಾಜ್ಯದ ನಾಲ್ಕು ವಿಭಾಗಗಳಿಂದ 14/17 ವಯೋಮಿತಿಯ ಬಾಲಕ/ ಬಾಲಕಿಯರು ಭಾಗವಹಿಸಿದ್ದರು. ಅದರಂತೆ ಬೆಳಗಾವಿ ವಿಭಾಗದಿಂದ 17 ವಯೋಮಿತಿಯ ಬಾಲಕರ ಕಬಡ್ಡಿ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲಾ ತಂಡ ಹಾಗೂ ವಿಜಯಪುರ ತಂಡ ಭಾಗವಹಿಸಿತ್ತು.

ವಯೋಮಿತಿಗೂ ಮೀರಿದ ವಿದ್ಯಾರ್ಥಿಗಳಿಂದ ಅನರ್ಹ ?

ಹೌದು 17 ವಯೋಮಿತಿಯ ಬೆಳಗಾವಿ ವಿಭಾಗದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಬಾಗಲಕೋಟೆ ಹಾಗೂ ವಿಜಯಪುರ ತಂಡದಲ್ಲಿ ಮೂವರು ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಲೋಪ ದೋಷಗಳಿದ್ದು ಹಾಗೆ ಇಲಾಖೆ ನೀಡಿದ ಎಸ್ ಎ ಟಿ ಎಸ್ ಸಂಖ್ಯೆಯಲ್ಲಿ ಲೋಪವಿರುವ ಕಾರಣ ಬೆಳಗಾವಿ ವಿಭಾಗದ ಬಾಲಕರ ತಂಡವನ್ನು ಪಂದ್ಯಾವಳಿಯಿಂದಲ್ಲೆ ಅನರ್ಹ ಮಾಡಿ ಹೊರಹಾಕಿದ್ದಾರೆ. ಆದರೆ ಆಯೋಜಕರು ಯಾವ ಕಾರಣಕ್ಕೆ ಪಂದ್ಯಾವಳಿಯಿಂದ ಹೊರಹಾಕಿದ್ದಾರೆ ಎಂಬ ಅಧಿಕೃತ ದಾಖಲೆ ಮಾತ್ರ ಇದುವರೆಗೂ ನಿಡಿಲ್ಲ. ಒಟ್ಟಿನಲ್ಲಿ ಬಾಗಲಕೋಟೆ ತಂಡದಲ್ಲಿ ಲೋಪವಿದೆಯೋ ಅಥವಾ ಆಯೋಜಕರ ನಿರ್ಧಾರದಲ್ಲಿ ತಪ್ಪಾಗಿದೆಯೋ ಎಂಬ ಅಂಶ ಮಾತ್ರ ಅಧಿಕೃತ ಆದೇಶ ಬಂದಮೇಲೆ ತಿಳಿಯಬೇಕಾಗಿದೆ.

ವಿದ್ಯಾರ್ಥಿಗಳ ದಾಖಲಾತಿ ಸರಿಯಾಗಿದ್ದರೆ ತಂಡದ ವ್ಯವಸ್ಥಾಪಕರು ಯಾಕೆ ಪ್ರಶ್ನೆ ಎತ್ತಲಿಲ್ಲ?

ಎಸ್ ಇದು ಕೂಡ ಒಂದು ಯಕ್ಷಪ್ರಶ್ನೆಯಾಗಿದೆ!  ಬಾಗಲಕೋಟೆ ತಂಡದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸರಿಯಾಗಿದ್ದರೆ ತಂಡದ ವ್ಯವಸ್ಥಾಪಕರು ಆಯೋಜಕರ ವಿರುದ್ಧ ಯಾಕೆ ಪ್ರಶ್ನೆ ಎತ್ತಲಿಲ್ಲ? ಅದು ಅಲ್ಲದೆ ಇಲಾಖೆಗೆ ಸಂಬಂಧಪಟ್ಟಂತ ಕ್ರೀಡಾಕೂಟದಲ್ಲಿ ಇಲಾಖೆಯ ಅಧಿಕಾರಿಗಳು ಇರುತ್ತಾರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿಯಾದ ದಾಖಲೆಗಳನ್ನು ಒದಗಿಸಬೇಕಿತ್ತು, ಆದರೆ ಬಾಗಲಕೋಟೆ ತಂಡದಲ್ಲಿ ದಾಖಲಾತಿಗಳು ಕೊರತೆ ಇರಬಹುದೆಂಬ ಕಾರಣದಿಂದ ವ್ಯವಸ್ಥಾಪಕರು ಆಯೋಜಕರು ನೀಡಿದ ಸಲಹೆಯಂತೆ ಪಂದ್ಯಾವಳಿಯಿಂದ ಹೊರ ನಡೆದಿದ್ದಾರೆ. ಒಂದು ವೇಳೆ ಬೆಳಗಾವಿ ವಿಭಾಗ ತಂಡದ ಎಲ್ಲಾ ಆಟಗಾರರ ದಾಖಲಾತಿ ಸರಿಯಾಗಿದ್ದರೆ ಆಯೋಜಕರ ವಿರುದ್ಧ ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ಕೂಡ ಸಲ್ಲಿಸಬಹುದು. ಆದರೆ ಇದೇ ತಂಡದಲ್ಲಿ ಲೋಪ ದೋಷವಿದ್ದರೆ ಇದಕ್ಕೆ ಸಂಬಂಧ ಪಟ್ಟ ಶಿಕ್ಷಣ ಇಲಾಖೆ ಮಾತ್ರ ಈ ತಂಡದ ವಿರುದ್ಧ ಹಾಗೂ ಈ ತಂಡದ ವ್ಯವಸ್ಥಾಪಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

ಇದೆ ಬಾಗಲಕೋಟೆ ತಂಡದ ಸಲುವಾಗಿ ವಿಭಾಗ ಮಟ್ಟದ ಪಂದ್ಯಾವಳಿಯನ್ನು ಮರು ಸಂಘಟಿಸಲಾಗಿತ್ತು.

ಬೆಳಗಾವಿ ವಿಭಾಗ ಮಟ್ಟದ ಪಂದ್ಯಾವಳಿಯನ್ನು ಮರು ಸಂಘಟಿಸಲು ಆದೇಶ ಪತ್ರ

ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿಯು ದಿ. 04/10/2024 ರಿಂದ 06/10/2024ರ ವರೆಗೆ ಶ್ರೀ ಅಭಿನವ ವಿಧ್ಯಾ ಸಂಸ್ಥೆ ವಿಜಯಪುರ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು ಆದರೆ ಪಂದ್ಯಾವಳಿಗೆ ಬಾಗಲಕೋಟೆ ತಂಡ ತಡವಾಗಿ ಬಂದ ಕಾರಣ ಪಂದ್ಯಾವಳಿಯಿಂದ ಕೈಬಿಡಲಾಗಿತ್ತು. ಇತ್ತ ಪಂದ್ಯಾವಳಿಯಲ್ಲಿ ಬೆಳಗಾವಿ ಹಾಗೂ ಶಿರಸಿ ತಂಡಗಳು ಫೈನಲ್ ಹಂತಕ್ಕೆ ತಲುಪಿದ್ದವು ಆದರೆ ವಿಜಯಪುರ ತಂಡದವರು ಶಿರಸಿ ತಂಡದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಫೈನಲ್ ಪಂದ್ಯವನ್ನು ತಡೆ ಹಿಡಿದಿದ್ದರು. ಅಷ್ಟರಲ್ಲಿ ಬಾಗಲಕೋಟೆ ತಂಡದವರು ಆಯುಕ್ತರ ಕಚೇರಿಗೆ ಅನ್ಯಾಯವಾಗಿದೆ ಎಂದು ಸಂಘಟಕಾರರ ವಿರುದ್ಧ ಧ್ವನಿ ಎತ್ತಿದರು.

ಅಷ್ಟೇ ಅಲ್ಲದೆ ಶಿಕ್ಷಣ ಇಲಾಖೆಯ ಕ್ರೀಡಾಕೂಟದಲ್ಲಿ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದ ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಧಾರವಾಡ ಹಾಗೂ ಬೆಳಗಾವಿ ವಿಭಾಗದ ಶಿಕ್ಷಣ ಇಲಾಖೆ ಅಧಿಕಾರಿಗಳು ಇಲಾಖೆಯ ನಿಯಮವನ್ನೇ ಉಲ್ಲಂಘಿಸಿ ಫೈನಲ್ ಹಂತಕ್ಕೆ ತಲುಪಿದ ಪಂದ್ಯಾವಳಿಯನ್ನು ಮರು ಸಂಘಟಿಸಲು ಆದೇಶಿಸಿದರು. ಮರು ಸಂಘಟನೆಯಿಂದ ಬೆಳಗಾವಿ ಹಾಗೂ ಶಿರಸಿ ತಂಡದ ವಿದ್ಯಾರ್ಥಿಗಳಿಗೆ ಬಾರಿ ಅನ್ಯಾಯವಾಗಿದ್ದು ಇದರಿಂದ ಬಾಗಲಕೋಟೆ ತಂಡಕ್ಕೆ ಲಾಭದಾಯಕವಾಗಿತ್ತು. ಪಂದ್ಯಾವಳಿಯಲ್ಲಿ ಬಾಗಲಕೋಟೆ ತಂದ ಜಯ ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು.

ಕಾಕತಾಳಿಯೋ ಅಥವಾ ಬೆಳಗಾವಿ ಹಾಗೂ ಶಿರಸಿ ತಂಡದ ವಿದ್ಯಾರ್ಥಿಗಳ ಮರ ಮರಿಕಿಯೋ ಗೊತ್ತಿಲ್ಲ! ಆದರೆ ಏನೇ ಆಗಲಿ ವಿಭಾಗ ಮಟ್ಟದ ಪಂದ್ಯಾವಳಿಯನ್ನು ಮರು ಸಂಘಟಿಸುವ ಮುನ್ನ ಬಾಗಲಕೋಟೆ ತಂಡವನ್ನು  ಸರಿಯಾಗಿ ಪರಿಶೀಲಿಸಬಹುದಾಗಿತ್ತು. ಆದರೆ ಯಾವುದೇ ರೀತಿ ಪರಿಶೀಲನೆ ಮಾಡದೆ ಸೂಕ್ತ ಕ್ರಮ ಕೈಗೊಳ್ಳದೆ ಯಾರದೋ ಮನವೊಲಿಸಲಿಕ್ಕೆ ಬೆಳಗಾವಿ ಹಾಗೂ ಶಿರಸಿ ತಂಡದ ವಿದ್ಯಾರ್ಥಿಗಳ ಬಾಳಲ್ಲಿ ಚೆಲ್ಲಾಟವಾಡಿದ ಅಧಿಕಾರಿಗಳು. ಇಂತಹ ತಂಡವನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿ ಬೆಳಗಾವಿ ವಿಭಾಗದ ಮರಿಯಾದೆಯನ್ನೆ ಮಾರಿ ಬಂದಂತಾಗಿದೆ. ಅದು ಅಲ್ಲದೆ “ಗಂಡ ಹೆಂಡರ ನಡುವೆ ಕೂಸು ನಾಸು” ಎಂಬ ಗಾದೆ ಮಾತಿನಂತೆ ಬೆಳಗಾವಿ ಹಾಗೂ ಶಿರಸಿ ತಂಡಗಳು ಅತಂತ್ರವಾಗಿ ಯಾರದೋ ಪ್ರತಿಷ್ಠೆಗಾಗಿ ಬಲಿಪಶುಗಳಾಗಿವೆ.

ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಅನರ್ಹವಾಗಿದಕ್ಕೆ ಹೊಣೆ ಯಾರು? 

ರಾಜ್ಯಮಟ್ಟದ ಪಂದ್ಯಾವಳಿಯಿಂದ ಅನರ್ಹವಾದ ಬೆಳಗಾವಿ ವಿಭಾಗದ  ತಂಡವನ್ನು ಆಯ್ಕೆ ಮಾಡಿದ ಸಮಿತಿ ಹಾಗೂ ಬಾಗಲಕೋಟೆ ತಂಡ ಮತ್ತು ವಿಜಯಪುರದ ತಂಡವನ್ನು  ಸರಿಯಾದ ದಾಖಲಾತಿಗಳನ್ನು ಪರಿಶೀಲನೆ ಮಾಡದೆ ರಾಜ್ಯಮಟ್ಟದ ಪಂದ್ಯಾವಳಿಗೆ ಕಳುಹಿಸಿದ ಅಧಿಕಾರಿಗಳು ಹಾಗೂ ಇಂತಹ ತಂಡವನ್ನು ಕಳುಹಿಸಿ ಬೆಳಗಾವಿ ವಿಭಾಗಕ್ಕೆ ಅವಮಾನ ಒದಗಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಬೆಳಗಾವಿ ಹಾಗೂ ಶಿರಸಿ ತಂಡಕ್ಕೆ ಅನ್ಯಾಯ ಮಾಡಿದ ಅಧಿಕಾರಿಗಳ ವಿರುದ್ಧ ಹಾಗೂ ವಿಜಯಪುರ ಜಿಲ್ಲೆಯ ದೈಹಿಕ ಶಿಕ್ಷಣ ಅಧಿಕಾರಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಅಮಾನತು ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಇಲ್ಲ ಎಂಬುದು ಮಾತ್ರ ಕಾದು ನೋಡಬೇಕಾಗಿದೆ.

ಶಿಕ್ಷಣ ಇಲಾಖೆ ಸಂಘಟಿಸುವ ಕ್ರೀಡಾಕೂಟಗಳಲ್ಲಿ ರಾಜಕೀಯ ಹಾಗೂ ಪ್ರಭಾವಿ ವ್ಯಕ್ತಿಗಳು ಭಾಗಿಯಾಗುವುದು ಮಾತ್ರ ತಪ್ಪು. ಕ್ರೀಡಾಕೂಟಗಳಲ್ಲಿ ಗೆಲ್ಲಲು ಕೆಲವು ಶಾಲೆಯಲ್ಲಿ ವಯಸ್ಸಾದ ವಿದ್ಯಾರ್ಥಿಗಳನ್ನು ಹಾಗೂ ಯಾರದೋ ವಿದ್ಯಾರ್ಥಿಯ ಹೆಸರಲ್ಲಿ ಇನ್ಯಾರದೋ ದಾಖಲಾತಿಯನ್ನು ಸೃಷ್ಟಿಸಿ ಸರಿಯಾದ ವಯೋಮಿತಿಯ ವಿದ್ಯಾರ್ಥಿಗಳಿಗೆ ವಂಚನೆಯನ್ನು ಎಸಗುತ್ತಿರುವುದು ಮಾತ್ರ ನಿರ್ದಾಕ್ಷಣೀಯ ಅಪರಾಧವಾಗಿದೆ. ಇದರಿಂದ ನಿಷ್ಠಾವಂತ ತರಬೇತಿದಾರರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಸವಾಗುತ್ತಿದೆ.