ಇದು ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ ಮತ್ತು ಜೆಸ್ಕಾಂ ಗಳಂತಹ ವಿದ್ಯುತ್ ಘಟಕದ ಕೆಳದರ್ಜೆ ನೌಕರರ ಮೂಕ ಮರ್ಮರ..!

ಸಾಂದರ್ಭಿಕ ಚಿತ್ರ

“ಏ ಹಲೋ ಎಲ್ಲಿ ಅದಿಯೋ ಬಸವಣ್ಣಿ ಯಾಕೋ ಹೆಂಗ್ ಐತಿ?? ನಿನ್ನೆ ಮಟಾ-ಮಟಾ ಮಧ್ಯಾಹ್ನದಾಗ ಕರೆಂಟ್ ತಗದೀರಿ,ಇವತ್ತು ಮುಂಜಾನೆ ನಳದ ನೀರ ಬಂದಾಗೂ ಕರೆಂಟ್ ತಗದೀರಿ…. ನೀ ಎನ್ ಲೈನ್ ಮನ್ ಕಿ ಮಾಡಬೇಕ ಅಂದಿದಿಯೋ ಇಲ್ಲೋ….??”

“ನೋಡ್ರಿ ಸಾಹೇಬ್ರ ಇವತ್ತೆ ಲಾಸ್ಟ್ …ಇನ್ ಮುಂದ್ ನಮ್ ರೈತರಿಗೆ ಯಾವದೂ ರೀತಿ ತೊಂದರೆ ಆಗ್ಬಾರ್ದು…ಕನಿಷ್ಠ ನಾಕ್ ತಾಸ್ ಥ್ರೀ ಪೇಸ್ ಕೊಡಬೇಕು ಇಲ್ಲಂದ್ರ ನಿಮ್ ಕೆಇಬಿ ಮುಂದ್ ರೈತರೆಲ್ಲ ಮನಿ ಮಂದ ಸಕಟ ಬಂದು ಆಮರಣ ಉಪವಾಸ ಧರಣಿ ಮಾಡ್ತೇವಿ…??”

ಹೀಗೆ ಹತ್ತಾರು ಬಾರಿ ಗದರಿಕೊಳ್ಳುವ ಜನರು ಕರೆಂಟ್ ಖೋತಾ ಆದಾಗೆಲ್ಲ ಹೆಸ್ಕಾಂ,ಮೆಸ್ಕಾಂ,ಬೆಸ್ಕಾಂ ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಯ ಸಿಬ್ಬಂದಿಯನ್ನ ಬೈದುಕೊಳ್ಳುತ್ತಲೇ ಇರುತ್ತಾರೆ.

ಅದರಲ್ಲೂ ಸರ್ಕಾರ ಉಚಿತ ವಿದ್ಯುತ್ ಅಂತ ಘೋಷಣೆ ಮಾಡಿ ಇನ್ನೂ ಆದೇಶ ಹೊರಡಿಸುವ ಮೊದಲೆ ಬಾಕಿ ಬಿಲ್ ತುಂಬಿಸಿಕೊಳ್ಳಲು ಹೋದ ಬಿಲ್ ಕಲೆಕ್ಟರ್ ಗಳ ಜೊತೆಗೆ ಮಹಿಳಾ ಮಣಿಗಳು ವಾಗ್ವಾದಕ್ಕೆ ಇಳಿದರೆ, ಇನ್ನೂ ಕೆಲವು ಕಡೆ ಅಮಾಯಕ ಬಿಲ್ ಕಲೆಕ್ಟರ್ ಗಳ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ದಗಳ ನಿಂದನೆಯೂ ಆಗಿದ್ದನ್ನ ನೋಡಿದರೆ ಕರುಳು ಕಿವುಚಿದಂತಾಗುತ್ತದೆ.

ಸಾಂದರ್ಭಿಕ ಚಿತ್ರ

ಮಳೆ-ಗಾಳಿಗೆ ಶಾರ್ಟ ಸರ್ಕಿಟ್ ನಿಂದ ಅಥವಾ ಫೀಡರ್ ಫೆಲ್ಯೂವರ್ ಮತ್ತು ಓವರ್ ಲೋಡ್ ನಿಂದ ವಿದ್ಯುತ್ ಪೂರೈಕೆ ವ್ಯಥ್ಯಯವಾದಾಗಲೂ ಕೂಡ ಒಂದೆರಡು ನಿಮಿಷಗಳಲ್ಲಿ ಹೆಲ್ಪಲೈನ್ ಗೆ ಕರೆ ಮಾಡುವ ಮತ್ತು ಏರಿಯಾ ಲೈನ್ ಮನ್ ಗಳಿಗೆ ಹಾಗೂ ಸೆಕ್ಷಣ್ ಆಫೀಸರ್ ಗಳಿಗೆ ಪೋನಾಯಿಸುವ ಅದೆಷ್ಟೋ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ ಅವರೂ ಕೂಡ ನಮ್ಮ ಹಾಗೆ ಮನುಷ್ಯರು ಅನ್ನುವದು.

ಎಷ್ಟೋ ಸಲ ಜೋರ್ ಲಗಾಕೆ ಹೈಸಾ….. ಧಮ್ ಲಗಾಕೆ ಹೈಸಾ… ಅನ್ನುತ್ತಲೇ ವಿದ್ಯುತ್ ಕಂಬಗಳನ್ನು ರಸ್ತೆಪಕ್ಕದಲ್ಲಿಯೋ,ಕೆಸರು ತುಂಬಿದ ಜಮೀನುಗಳಲ್ಲಿಯೋ ಹುಗಿದು ನಿಲ್ಲಿಸುವಾಗ ಆಯತಪ್ಪಿ ಮೇಲೆ ಕಂಬ ಬಿದ್ದಾಗ ಕೈ ಕಾಲು ಮುರಿದುಕೊಂಡ ಮತ್ತು ,ಮಳೆ ಗಾಳಿಯಿಂದ ಹರಿದ ವಿದ್ಯುತ್ ಪೂರೈಕೆಯ ಕೇಬಲ್ ಸರಿ ಪಡಿಸುವಾಗ ಎಲ್ ಸಿ ಫಾಲ್ಟ್ ಆಗಿ ಸಾವನ್ನೇ ಅಪ್ಪಿದ ಲೈನ್ ಮನ್ನುಗಳನ್ನ, ಮತ್ತು ಹಸಿರು ಮಿಶ್ರಿತ ಖಾಕಿ ಬಟ್ಟೆ ಮತ್ತು ಅಂಗಿಯ ಜೇಬಿನಲ್ಲಿ ಪೆನ್ನು ಇಡುವ ಜಾಗದಲ್ಲಿ ಟೆಸ್ಟರ್ ಹಾಗೂ ಪ್ಯಾಂಟಿನ ಪರ್ಸ್ ಇಡುವ ಹಿಂಬದಿಯ ಪಾಕೇಟಿನಲ್ಲಿ ಪಕ್ಕಡ್ ಇಟ್ಟುಕೊಂಡ ಲೈನ್ ಮನ್ನುಗಳನ್ನ ನೋಡಿದಾಗೆಲ್ಲ ನಮ್ಮ ನಿತ್ಯದ ಒಡನಾಡಿಗಳು ಅನ್ನುವದನ್ನೆ ಮರೆತು ಬಹುತೇಕ ಬಹಳಷ್ಟು ಜನರು ಸೌಜನ್ಯಕ್ಕೂ ಅವರನ್ನು ಮಾತನಾಡಿಸದೆ ಹೊರಟು ಹೋಗುತ್ತಾರೆ.

ಓ ಅವರಾ?? ರೈತರ ಜಮೀನಿಗೆ ಟಿಸಿ ಕೊಡಲು ಹಣಕ್ಕಾಗಿ ಬೇಡಿಕೆ ಇಡುತ್ತಾರೆ,ಬೇಸಿಗೆಯಲ್ಲಿ ಬೇಕಂತಲೆ ಕರೆಂಟ್ ತೆಗೆಯುತ್ತಾರೆ,ನಾವೇನು ಬಿಲ್ ಕಟ್ಟಿಲ್ಲವಾ ಸರಿಯಾಗಿ ಸರ್ವಿಸ್ ಕೊಡೋಕೆ ಆಗಲ್ವಾ?? ಅನ್ನುವ ಜನರ ನಡುವೆಯೇ ಮಳೆಗಾಲದಲ್ಲಿ ಲೈನ್ ಸರಿ ಪಡಿಸಲು ಹತ್ತಿದ ವಿದ್ಯುತ್ ಕಂಬದಿಂದ ಜಾರಿ ಬಿದ್ದು ಸೊಂಟ ಮುರಿದುಕೊಂಡ,ಮತ್ತು ಬೈ ಮಿಸ್ಟೇಕ್ ಆಗಿ ವಿದ್ಯುತ್ ಹರಿಯುವ ತಂತಿಯನ್ನು ನ್ಯೂಟ್ರಲ್ ಇರಬಹುದು ಅಂತ ಹಿಡಿದ ತಪ್ಪಿಗೆ ಕೈ ಸುಟ್ಟು ಕರಕಲಾಗಿ ಶಾಶ್ವತ ಊನತೆಗೆ ಒಳಗಾದ ಹಾಗೂ ಯಾರೋ ಕದ್ದು ಮುಚ್ಚಿ ಬೇರೆ ಕಡೆ ಹುಕ್ ಹಾಕಿದ್ದು ಗಮನಕ್ಕೆ ಬರದೆ ಜನರೇಟರ್,ಇನ್ವರ್ಟರ್ ಮತ್ತು ಬೇರೆ ಲೈನಿಂದ ಕದ್ದು ಕನೆಕ್ಷನ್ ಪಡೆದಿರುವ ಪರಿಣಾಮ ವಿದ್ಯುತ್ ರಿವರ್ಸ್ ಪಾಸ್ ಆಗಿ ಜೀವವನ್ನೆ ಬಿಟ್ಟ ಅದೆಷ್ಟೋ ಲೈನ್ ಮನ್ ಗಳ ಆತ್ಮದ ಮರ್ಮರ ಮಾತ್ರ ಇಲ್ಲಿ ಯಾರಿಗೂ ಕೇಳಿಸುವದಿಲ್ಲ.

ಲೈನ್ ಮನ್ ಒಬ್ಬ ಜೀವಂತವಾಗಿ ಕಂಬದ ಮೇಲೆ ಸುಟ್ಟು ಕರಕಲಾದಾಗ ಐದು ಹತ್ತು ಲಕ್ಷದ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವ ಜನರಿಗೆ ಜವರಾಯ ಅನಾಮತ್ತು ಹೊತ್ತೋಯ್ದ ಆ ವ್ಯಕ್ತಿಯನ್ನು ಅವಲಂಬಿಸಿದ್ದ ಕುಟುಂಬದವೆ ಚಿತ್ರಣ ಕಣ್ಣ ಮುಂದೆ ಬರುವದೇ ಇಲ್ಲ.

ವಿದ್ಯುತ್ ಕಣ್ಣಾ ಮುಚ್ಚಾಲೆ,ಲೋಡ್ ಶೆಡ್ಡಿಂಗ್,ಅಂತೆಲ್ಲ ಪುಂಖಾನು-ಪುಂಖವಾಗಿ ಪುಟಗಟ್ಟಲೆ ಬರೆಯುವ ಮತ್ತು ಗಂಟೆಗಟ್ಟಲೆ ಒದರುವ ಮಾಧ್ಯಮಗಳು ವಿದ್ಯುತ್ ಘಟಕಗಳ ಖಾಸಗೀಕರಣ,ವಿಭಾಗೀಕರಣ ಮತ್ತು ಅಲ್ಲಿ ಮೇಲಾಧಿಕಾರಿಗಳ ದಾರ್ಷ್ಟ್ಯಕ್ಕೆ ಒಳಗಾಗುತ್ತಿರುವ ಇದೆ “ಡಿ ದರ್ಜೆಯ” ನೌಕರರ ಬಗ್ಗೆ ಕನಿಷ್ಠ ಪಕ್ಷ ಅನುಕಂಪದ ಮಾತನ್ನೂ ಆಡುವದಿಲ್ಲ.

ಸರ್ ನನ್ನ ಹೆಂಡತಿ ಹೊಟ್ಟಿಲೆ ಅದಾಳ್ರಿ ಚೊಚ್ಚಲ್ ಹೆರಿಗಿ ಐತಿ ಕಳಿ ಬರಾತಾವ ಅಂತ್ ಫೋನ್ ಮಾಡ್ಯಾಳ್ರಿ…. ಎರಡ್ ದಿನಾ ರಜೆ ಬೆಕ್ರಿ ಸರ್…. ಅನ್ನುವ ಲೈನ್ ಮನ್ ಗಳಿಗೆ ಅಲಾ ಮಗನಾ ರಜಾ ಬೇಕು ತಗೋರೋ ರಾಯಪ್ಪ….ಆದ್ರ ಲೈನ್ ಫಾಲ್ಟ ಆಗಲಾರ್ದಂಗ ನೀನ ನೋಡಕೋಬೇಕು ಅನ್ನುತ್ತ ಅತ್ತ ಹಾವೂ ಸಾಯಬಾರದು ಇತ್ತ ಕೋಲೂ ಮುರಿಯಬಾರದು ಅನ್ನುವ ಇಕ್ಕಟ್ಟಿನಲ್ಲಿ ಸಿಕ್ಕಿಸುವ ಮೇಲಾಧಿಕಾರಿಗಳ ಮಾತಿಗೆ ನೌಕರಿ ಖಾಯಮ್ಮಾತಿಯ ಕನಸು ಕಾಣುತ್ತ ಜೀ ಹುಜೂರ್ ಅನ್ನಲೇ ಬೇಕಾದ ಅನಿವಾರ್ಯತೆ ಈ ಲೈನ್ ಮನ್ ಗಳದ್ದು ಅನ್ನುವದನ್ನ ಮರೆಯುವಂತಿಲ್ಲ

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಬೈಕಿನಲ್ಲಿ ಅಲೆಯುತ್ತ ಗಿಡ-ಮರಗಳನ್ನು ನೋಡಿ ಕುರಿಗಾಹಿಗಳಂತೆ ಬಿದಿರ ಗಳಕ್ಕೆ ಕಟ್ಟಿದ ಕುಡಗೋಲು ಹಾಕಿ ಕತ್ತರಿಸುವ , ಮತ್ತು ಬೇಸಿಗೆಯಲ್ಲಿ ಲೂಸ್ ಕನೆಕ್ಷನ್ ಹುಡುಕುತ್ತ ಓಣಿಗಳಲ್ಲಿ ಅಲೆಯುವ ಲೈನ್ ಮನ್ ಗಳಿಗೆ ಚಹಾ,ಕಾಫಿ,ಕೇಳುವದು ದೂರದ ಮಾತು ಬಿಡಿ. ಕನಿಷ್ಠ ಒಂದು ತಂಬಿಗೆ ನೀರು ಕೊಡುವ ಸೌಜನ್ಯವೂ ನಮ್ಮಲ್ಲಿ ಇಲ್ಲವಾಗಿರುವದು ದುರದೃಷ್ಟವೇ ಸರಿ.

ಎಷ್ಟೋ ಸಲ ಹಗಲು ರಾತ್ರಿ ಅನ್ನದೆ ಎರಡೂ ಪಾಳಿಗಳಲ್ಲಿ ದುಡಿಯುವ ಕೆಇಬಿಯ ನೌಕರರು ಯಾವುದೋ ಗುತ್ತಿಗೆ ದಾರನ ಗುತ್ತಿಗೆ ಕಾರ್ಮಿಕರಾಗಿರುತ್ತಾರೆಯೇ ಹೊರತು ಸರ್ಕಾರಿ ನೌಕರರು ಅಲ್ಲವೇ ಅಲ್ಲ ಅನ್ನುವದು ಕೂಡ ನಮ್ಮ ತಲೆಗೆ ಹೊಳೆಯುವದೇ ಇಲ್ಲ.

ರಾತ್ರಿ ಒಂದೆರಡು ಗಂಟೆಯ ಸರ ಹೊತ್ತಿನಲ್ಲಿ ಕೈ ಕೊಟ್ಟ ವಿದ್ಯುತ್ ನಿಂದ ಫ್ಯಾನು ತಿರುಗದೆ ಸೆಕೆಯಾದಾಗ,ಮನೆಯಲ್ಲಿ ಮಕ್ಕಳು ಆಬೂ ಅಂತ ಎದ್ದು ಕುಳಿತು ನೀರು ಕೇಳಿದಾಗ ಜೋರಾ ನಿದ್ದೆಗಣ್ಣಲ್ಲಿ ಎದ್ದು ಖಾಕಿ ತೊಟ್ಟ ಈ ಸಿಬ್ಬಂದಿಯನ್ನು ಶಪಿಸುವ ಮುನ್ನ ಅವರಿಗೂ ನಮ್ಮ ಮನೆಯಲ್ಲಿ ಇರುವಷ್ಟೇ ಪುಟಾಣಿ ಕಂದಮ್ಮಗಳಿದ್ದು ರಾತ್ರಿ ಎಚ್ಚರವಾದಾಗ ಅಪ್ಪಾ ಬೇಕು ಅಂತ ಅಳುತ್ತಿರಬಹುದು ಅಲ್ಲವಾ??

ಹತ್ತು ಹನ್ನೆರಡು ಸಾವಿರದಿಂದ ಆರಂಭವಾಗುವ ಸಂಬಳ ಅಬ್ಬಬ್ಬ ಅಂದರೆ ಮೂವತ್ತು ಸಾವಿರದ ಆಸು ಪಾಸು ತಲುಪುವಷ್ಟರಲ್ಲೆ ಅರೆ ಸರ್ಕಾರಿ ನೌಕರನಾಗಿ ದೈವದ ಬಲವೊಂದಿದ್ದರೆ ಅಷ್ಟೇ ಯಾವ ಆಘಾತ,ಅಪಘಾತವೂ ಸಂಭವಿಸದೆ ಬದುಕುಳಿದು ಮಡದಿ ಮಕ್ಕಳೊಂದಿಗೆ ಕಾಲ ಕಳೆಯುವ ಮತ್ತು ಬೇಸರ ಕಳೆಯಲು ಬಾಯಲ್ಲಿ ಪಾನ್ ಹಾಕಿಕೊಂಡೋ,ಆರ್ ಎಮ್ ಡಿ ಅಥವಾ ವಿಮಲ್ ಹಾಕಿಕೊಂಡೋ ಎಲ್ಲಿ ಹೆಚ್ಚಿಗೆ ಮಾತನಾಡಿದರೆ ಬಾಯಿ ತಪ್ಪಿ ತಮ್ಮ ಭವನೆಗಳು ಜನರ ಎದುರು ತೆರೆದುಕೊಳ್ಳುತ್ತವೋ ಅನ್ನುವ ಭಯದಲ್ಲೇ ಬದುಕುತ್ತ ಜೀವನ ಸಾಗಿಸುವ ಲೈನ್ ಮನ್ ಗಳ ಬಗ್ಗೆ ಒಂದಷ್ಟು ಕರುಣೆ,ಪ್ರೀತಿ,ವಾತ್ಸಲ್ಯಗಳು ನಿಮ್ಮ ಒಳಗೂ ಇರಲಿ…

ಸಾಂದರ್ಭಿಕ ಚಿತ್ರ

ಎಸ್ ಎಸ್ ಎಲ್ ಸಿ,ಪಿಯೂಸಿ ಮತ್ತು ಐಟಿಐ ಕಲಿತು ಕೆಲಸ ಹಿಡಿದ
ಮೊದಲ ಮೂರು ವರ್ಷವಂತೂ ಹತ್ತು ಹನ್ನೆರಡು ಸಾವಿರದಲ್ಲಿ ದುಡಿಯುತ್ತ, ಎಎಲ್ ಮ್,ಜೆ ಎಲ್ ಎಮ್,ಎಸ್ ಎಲ್ ಎಮ್ ಮತ್ತು ಮೇಸ್ತ್ರಿ ಯಿಂದ ಹಿಡಿದು ವಿದ್ಯಾರ್ಹತೆ ಹಾಗೂ ಅನುಭವ ಆಧರಿಸಿ ಜೆ.ಇ.ಇ,ಎ ಇ ಇ, ಆಗುವದೊರಳಗೆ ಅದೆಷ್ಟು ಜೀವಗಳು ಹೈರಾಣಾಗಿರುತ್ತವೆಯೋ ಬಲ್ಲವರು ಯಾರು??

ಸಂಬಳ ಬರುತ್ತೆ ಅನ್ನುವದೊಂದು ಬಿಟ್ಟರೆ ಜೀವಕ್ಕೆ ಯಾವಾಗ ಆಪತ್ತು ಬರುತ್ತದೆ ಅಂತಲೂ ತಿಳಿಯದ ನಿರಂತರ ದುಡಿಮೆ ಅವರದ್ದು ಅನ್ನುವದು ಬಹಳಷ್ಟು ಜನರಿಗೆ ತಿಳಿಯುವದೇ ಇಲ್ಲ.ಬಯಲು ಸೀಮೆಗೆ ಹೋಲಿಸಿ ನೋಡಿದರೆ ಮಲೆನಾಡು ಮತ್ತು ಘಟ್ಟ ಪ್ರದೇಶಗಳಲ್ಲಿ ಇವರ ಕೆಲಸ ಮತ್ತಷ್ಟು ಜಟಿಲವಾಗಿರುತ್ತದೆ.ಕಾಡು ಮೇಡು ಅಲೆಯುವ ಬೆಟ್ಟ ಗುಡ್ಡ ಹತ್ತಿ ಇಳಿಯುವ ಸರ್ಕಸ್ ಜೊತೆಗೆ ಇವರ ಜೀವಕ್ಕೆ ಅಪಾಯ ಅನ್ನುವದು ದ್ವಿಗುಣವಾಗುತ್ತಲೇ ಇರುತ್ತದೆ.

ನಿರಂತರ ಜ್ಯೋತಿ,ಗೃಹಜ್ಯೋತಿಅಂತಹ ಸ್ಕೀಮುಗಳು ಏನೇ ಇರಲಿ,ನಿಮ್ಮ ಮನೆಯ ಬಿಲ್ ಕಳೆದ ಜೂನ್ ತಿಂಗಳಿಂದ ಝೀರೋ ಬರುತ್ತಿದೆಯೋ ಇಲ್ಲವೋ ಅದು ಕೂಡ ಪಕ್ಕಕ್ಕೆ ಇರಲಿ.

ಯೋಧನೊಬ್ಬ ಗಡಿಯಲ್ಲಿ ದೇಶ ಕಾಯುವಷ್ಟೇ ಜತನದಿಂದ ರಾತ್ರಿ ಎಲ್ಲ ಲೈನ್ ಪಾಲ್ಟ್ ಆಗದಂತೆ ಕಣ್ಣು ಮುಚ್ಚದೆ ಕಾಯುವ ಮತ್ತು ಹಗಲು-ರಾತ್ರಿಯ ಪಾಳಿಗಳಲ್ಲಿ ಬಿಡುವಿಲ್ಲದೆ ದುಡಿಯುವ ಲೈನ್ ಮನ್ ಗಳು ಕೂಡ ಹೀರೋಗಳೆ ಅನ್ನುವದು ನಿಮಗೆಲ್ಲ ನೆನಪಿರಲಿ…

ಬರಹ: ದೀಪಕ್ ಶಿಂಧೆ (ಹಿರಿಯ ವರದಿಗಾರರು)
            ಅಥಣಿ