ಈ ರಂಗಾದ ರಂಗ ಪಂಚಮಿ ಯಾವುದೋ ಕಾರಣದಿಂದ ನಿಮ್ಮನ್ನು ದಂಗು ಬಡಿಸದಿರಲಿ….!

ಸಾಂದರ್ಭಿಕ ಚಿತ್ರ

ಏ ವಿರುಪಾಕ್ಷಿ ಬಾ ಹೊರಗ್… ಎನೋ ಮಾರಾಯಾ… ಹೆಣ್ಣ ಮಕ್ಕಳ ಆಡಾತಾರೋ ಓಣ್ಯಾಗ ಬಣ್ಣಾ… ನೀ ಎನೋ ಪಾ ಬಚ್ಚಲಾಗ್ ಮುಚಗೊಂಡ ಕುಂತಿದಿ…..

ಏ ಬ್ಯಾಡೋ ದೋಸ್ತ…ನಾ ವಲ್ಲಿ ಪಾ…ನೀವ್ ವಾರ್ನೆಸ್ ಹಚ್ತೇರೀ…ನಂಗ್ ಆಗಿ ಬರಾಂಗಿಲ್ಲೊ…

ಏ ದೋಸ್ತ ನೀ ಬರತಿಯೋ?? ಯಾನ್ ಬಾಗಲಾ ಮುರದ್ ನಾವ…ಅ.. ಒಳಗ್ ಬರುಣೋ…..??

ಹೀಗೆ ತಮ್ಮ ಜೀವದ ಕುಚಿಕ್ಕು ಗೆಳೆಯನೊಬ್ಬನಿಗೆ ಉತ್ತರ ಕರ್ನಾಟಕದ ಮತ್ತೊಬ್ಬ ಗೆಳೆಯ ತನ್ನ ಓರಗೆಯ ನಾಲ್ಕಾರು ಜನರನ್ನ ಜೊತೆ ಮಾಡಿಕೊಂಡು ಬಂದು ರಂಗಪಂಚಮಿಯ ನಿಮಿತ್ಯ ಬಣ್ಣದ ಆಟಕ್ಕೆ ಕರೆಯುತ್ತಾನೆ…

ಅಯ್ಯೋ ಡಾಕ್ಟರ್ ಕಣ್ಣೆಲ್ಲಾ ಸಿಕ್ಕಾಪಟ್ಟೆ ಉರಿತಾ ಇದೆ ಪ್ಲೀಜ್! ಏನಾದ್ರೂ ಮಾಡಿ ಡಾಕ್ಟರ್….ಅಂತ ಕಿರುಚುತ್ತಿರುವ ವಿಶಾಲನನ್ನ ಅವನ ತಾಯಿ ಸ್ಕೂಟಿಯ ಮುಂಭಾಗದಲ್ಲಿ ಈಗಷ್ಟೇ ಕೂಡಿಸಿಕೊಂಡು ಆಸ್ಪತ್ರೆಯ ಓಪಿಡಿಯಲ್ಲಿ ನಿಂತಿದ್ದರೆ ಕೂಡಲೇ ಧಾವಿಸಿ ಬಂದ ಡಾಕ್ಟರ್ ನರೇಶ್ ಓಹ್ ಐ ಯಾಮ್ ವೇರಿ ಸಾರಿ…ನಿಮ್ಮ ಹುಡುಗನ ಕಣ್ಣಿಗೆ ಯಾರೋ ಬಳೆಚೂರು ಬಣ್ಣ ಹಾಕಿದ್ದಾರೆ ಅವನ ರೆಟಿನಾಗೆ ಮೇಜರ್ ಡ್ಯಾಮೇಜ್ ಆಗಿದೆ ಅಂತ ಹೇಳುತ್ತಿದ್ದರೆ ಇಷ್ಟು ಹೊತ್ತು ಅರ್ಧಂಬರ್ಧ ಧೈರ್ಯ ದಲ್ಲಿ ಇದ್ದ ವಿಶಾಲನ ತಾಯಿ ಕುಸಿದು ಬೀಳುತ್ತಿದ್ದಂತೆಯೆ ಅಲ್ಲಿದ್ದ ಕೆಲವಷ್ಟು ಹೆಣ್ಣುಮಕ್ಕಳು ಅವಳನ್ನ ಎತ್ತಿ ಕೂಡಿಸಿ ಸಮಾಧಾನಿಸ ತೊಡಗುತ್ತಾರೆ…

ದೋಸ್ತ ಹೇಳಿದ್ನೆಲ್ಲಪಾ ನೀವೆಲ್ಲಿ ಕೇಳ್ತಿರಿ??…
ಈಗ ಒಂದ್ ವಾರದಿಂದ ಮನ್ಯಾಂದ ಹೊರಗ ಬರಾಕೂ ಆಗವಲ್ತು….
ಮಾರಿ ನೋಡ್ ಹೆಂಗ್ ಉಬ್ಬೇತಿ?? ಡಾಕ್ಟರ್ರಿಗ್ ತೋರಿಸಿದ್ರ್ ಬಣ್ಣದಲೇನ ಸ್ಕಿನ್ ಇಂಪೆಕ್ಷನ್ ಆಗೇತಿ ಅಂದ್ರು….

ಹೀಗೆ ಒಂದಲ್ಲ ಒಂದು ಊರಿನಲ್ಲಿ ಕಾಮದಹನದ ಬಳಿಕ ಮತ್ತು ರಂಗಪಂಚಮಿಯ ದಿನಗಳಲ್ಲಿ ಕಂಡು ಬರುವ ದೃಶ್ಯಗಳಿವು.

ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಊರುಗಳಲ್ಲಿ, ಗಲ್ಲಿಗಳಲ್ಲಿ ಮತ್ತು ಪ್ರತಿ ಮನೆಗಳಲ್ಲಿ ಇಂತಹ ಒಂದಲ್ಲ ಒಂದು ಪ್ರಕರಣಗಳು ಕಾಣ ಸಿಗುತ್ತಿವೆ.

ನೈಸರ್ಗಿಕ ವಲ್ಲದ (ಆರ್ಟಿಪಿಷಿಯಲ್) ಬಣ್ಣಗಳನ್ನ ಬಣ್ಣದಾಟಕ್ಕೆ ಬಳಸುತ್ತಿರುವದರಿಂದ ಆಗುತ್ತಿರುವ ಕೆಮಿಕಲ್ ರಿಯಾಕ್ಷನ್ ಗಳಿಂದ ಇಂತಹ ಪ್ರಕರಣಗಳು ಕಂಡು ಬರುತ್ತಿದ್ದು ಮೋಜಿಗಾಗಿ ಆಡುವ ಬಣ್ಣದೋಕುಳಿ ಮಕ್ಕಳು,ವೃದ್ದರು,ಬಾಣಂತಿರು ಮತ್ತು ನವಜಾತ ಶಿಶುಗಳ ಆರೊಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಬಹಳಷ್ಟು ಜನ ಯುವಕರು ಹೋಳಿ ಹಬ್ಬದ ದಿನ ಕುಡಿದ ಮತ್ತಿನಲ್ಲಿ ಜಾರಿ ಬಿದ್ದು,ಬೈಕ್ ಸ್ಕಿಡ್ ಆಗಿ,ಅಥವಾ ಅಪಘಾತಗಳಾಗಿ ಜೀವ ಬಿಟ್ಟರೆ ಹಲವಾರು ಜನರು ಬಣ್ಣ ಹಚ್ಚಲು ಬಂದವರಿಂದ ತಪ್ಪಿಸಿಕೊಳ್ಳಲು ಓಡುವ ಭರದಲ್ಲಿ ಬಿದ್ದು ಮಾರಣಾಂತಿಕ ಗಾಯಗಳಿಂದ ಬಳಲಿದ ಘಟನೆಗಳು ಕೂಡ ಪ್ರತಿವರ್ಷವೂ ವರದಿಯಾಗುತ್ತಲೇ ಇರುತ್ತವೆ.

ಇನ್ನುಳಿದಂತೆ ಅಪರಿಚಿತರಿಗೆ ಬಣ್ಣ ಎರಚಿದ್ದಕ್ಕೆ….ಮಾತಿಗೆ ಮಾತು ಬೆಳೆದು… ವೈಪರೀತ್ಯಕ್ಕೆ ಹೋಗಿ… ಪೋಲಿಸ್ ಠಾಣೆಯ ಮೆಟ್ಟಿಲು ಏರಿದ ಪ್ರಸಂಗಗಳು ಹಲವು ಕಡೆ ನಡೆದರೆ…

ಅದು ಎಷ್ಟೋ ಜನ ಬಡವರು ನಿರ್ಗತಿಕರಿಗೆ ಆ‌ ಕ್ಷಣಕ್ಕೆ ರಸ್ತೆಯಲ್ಲಿ ಅಡ್ಡಗಟ್ಟಿ ಖುಷಾಲಿ(ದೇಣಿಗೆ)ಯ ಹಣ ಕೊಡದ ಕಾರಣಕ್ಕೆ ತೂತು ಮಾಡಿದ ಪ್ಲಾಸ್ಟಿಕ್ ಬಾಟಲಿಯಿಂದಲೋ ,ಅಥವಾ ದೊಡ್ಡ ಬ್ಯಾರೆಲ್ಲಿಗೆ ಸುರುವಿದ ಬಣ್ಣದ ನೀರನ್ನು ಮಗ್ಗುಗಳಲ್ಲಿ ತುಂಬಿ ಎರಚಿದ್ದರಿಂ ಗುಲಾಬಿ,ಹಳದಿ,ಹಸಿರು,ನೀಲಿ, ಕೆಂಪು,ಹೀಗೆ ತರಹೇವಾರಿ ಬಣ್ಣಗಳು ಅವರಿಗೆ ಇರಬಹುದಾದ ಅದೇ ಎರಡು ಜೊತೆ ಕಾಲರು ಮಾಸಿದ,ಮತ್ತು ತ್ಯಾಪೆ ಹಚ್ಚಿದ ಬಟ್ಟೆಗಳ ಮೇಲೆ ವರ್ಷಾನುಗಟ್ಟಲೇ ಢಾಳಾಗಿ ಕಾಣುವದನ್ನ ನೋಡಿದಾಗೆಲ್ಲ ನನಗೆ ಅಯ್ಯೋ ಪಾಪ ಅನ್ನಿಸಿಬಿಡುತ್ತೆ.

ರಂಜಾನ್ ತಿಂಗಳಲ್ಲಿ ಮಧ್ಯಾಹ್ನದ ನಮಾಜಿಗೆ ಹೊರಟ ಪರಿಚಯದ ಗೆಳೆಯನಿಗೆ ಹ್ಯಾಪಿ ಹೋಲಿ ಅಂತ ಯಾವುದೋ ಜೋಷ್ ನೊಂದಿಗೆ ಬಣ್ಣ ಹಚ್ಚುವ ಮೊದಲು…
ಮತ್ಯಾರದೋ ಬೆನ್ನ ಹಿಂದೆ ಅವರಿಗೆ ತಿಳಿಯದಂತೆ ಬಣ್ಣ ಚಿಮುಕಿಸಿ ಬಾಯಿ ಬಡಿದುಕೊಳ್ಳುವ ಮೊದಲು… ಮತ್ತು ಈಗಷ್ಟೇ ರಸ್ತೆಗೆ ಇಳಿದು ಆಸ್ಪತ್ರೆಯತ್ತ ಹೆರಿಗೆ ನೋವು ಕಾಣಿಸಿಕೊಂಡ ಹೆಂಗಸೊಬ್ಬಳನ್ನ ಕರೆದೊಯ್ಯುತ್ತಿರುವ ಆಟೋವನ್ನ ಅಡ್ಡಗಟ್ಟುವ ಮೊದಲು……
ಅಯ್ಯೋ ಬೇಡ ಪ್ಲೀಜ್ ನಿಮ್ಮ ದಮ್ಮಯ್ಯ ಅಂತೀನಿ ಅಂದವರಿಗೆ ಬಣ್ಣ ಎರಚುವ ಮೊದಲು ಯಾವುದಕ್ಕೂ ಒಮ್ಮೆ ಯೋಚಿಸಿ ನೋಡಿ.

ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಹತ್ತಿರವಾದಾಗಲೇ ಬರುವ ಈ ಹೋಳಿ ಹಬ್ಬದ ಆಚರಣೆ ಪರೀಕ್ಷೆಗಾಗಿ ಓದುವ ವಿದ್ಯಾರ್ಥಿಗಳಿಗೆ ಮತ್ತು ಪರೀಕ್ಷೆ ಬರೆಯಲು ಹೊರಟವರಿಗೆ ಹಾಗೂ ಸರ್ಕಾರಿ ರಜೆ ಸಿಗದೆ ಕರ್ತವ್ಯಕ್ಕೆ ತೆರಳುತ್ತಿರುವ ನೌಕರರಿಗೆ ತೊಂದರೆ ಉಂಟು ಮಾಡದಿರಲಿ.

ಹೋಳಿ ಹಬ್ಬ ಸಮೀಪಿಸುತ್ತಲೇ ಕಾಮ ದಹನದ ನೆಪದಲ್ಲಿ ವಾರ ಗಟ್ಟಲೆ ಗುಂಪಾಗಿ ಕುಳಿತು ಹಲಿಗೆಯನ್ನು ಜೋರಾಗಿ ಬಡೆಯುತ್ತ ಮಟ-ಮಟ ಮದ್ಯಾಹ್ನದ ಉರಿ ಬಿಸಿಲಿನಲ್ಲಿ ಬಾಲ್ಕನಿಯಿಂದ ಇಣುಕುವ ಪಕ್ಕದ ಮನೆಗೆ ಹೊಸದಾಗಿ ಬಾಡಿಗೆ ಬಂದ ಹುಡುಗಿಯೊಬ್ಬಳನ್ನ ಮೆಚ್ಚಿಸುವ ಪ್ರಯತ್ನದ ಬೀದಿ ಕಾಮಣ್ಣರು ಕಾಣಸಿಗುವ ದಿನಗಳ ನಡುವೆಯೇ, ಇತ್ತಿಚೆಗಷ್ಟೇ ಅಭಿವೃದ್ದಿ ಹೊಂದುತ್ತಿರುವ ಗಲ್ಲಿಯಲ್ಲಿ ಟಾರು ರಸ್ತೆಯ ಮಧ್ಯದಲ್ಲಿ ಅರ್ಧ ಆಳಿನಷ್ಟು ಗುಂಡಿಯನ್ನು ತೋಡಿ ಈ ವರ್ಷ ನಮ್ಮ ಕಾಮಣ್ಣ ದೊಡ್ಡದಾಗಿರಬೇಕು ಅಂತ ಅನ್ನುವ ಹುಡುಗರ ಗುಂಪುಗಳು ಕೂಡ ಇದ್ದೇ ಇರುತ್ತವೆ.

ಕಾಮಣ್ಣನ ದಹನದ ಮರುದಿನ ಅದು ಎಷ್ಟೋ ರಸ್ತೆಗಳಲ್ಲಿ ಬೃಹದಾಕಾರದ ಗುಂಡಿಗಳು ನಿರ್ಮಾಣವಾಗಿ ವ್ಷಾನುಗಟ್ಟಲೇ ಬೈಕ್ ಸವಾರರು ಅಲ್ಲಿಯೇ ಆಯತಪ್ಪಿ ಬಿದ್ದು ಗಾಯಗೊಳ್ಳುವದನ್ನ ಮತ್ತು ಗುಂಡಿ ತೋಡಿದವರ ಮನೆ ಮಂದಿಯನ್ನೂ ಬಿಡದೇ ಹಿಡಿಶಾಪ ಹಾಕುವನ್ನ ನೋಡಿರುವ ನನಗೆ ಬೆಂಕಿಯ ಝಳಕ್ಕೆ ಸುಟ್ಟು ಹೋದ ವಿದ್ಯುತ್ ವಯರ್ರುಗಳು,ಮತ್ತು ಕಟ್ ಆಗಿ ಬಿದ್ದಿರುವ ಕೇಬಲ್ ಗಳಿಂದಲೂ ವಿದ್ಯುತ್ ಪ್ರವಹಿಸಿ ನಡೆದಿರುವ ಘಟನೆಗಳ ಅಂದಾಜು ಖಂಡಿತ ಇದೆ.

ಇನ್ನುಳಿದಂತೆ ಹುಣ್ಣಿಮೆಯ ಮುನ್ನಾ ದಿನದ ಚಂದಿರನ ಮಂದ ಬೆಳಕಿನಲ್ಲಿ
ಕಂಡವರ ಮನೆಯ ಕಟ್ಟಿಗೆ ಕದಿಯಲು ಹೋದ ಪಟಾಲಮ್ಮಿನ ಹುಡುಗನೊಬ್ಬ ಕತ್ತಲೆಯಲ್ಲಿ ಕಟ್ಟಿಗೆಗೆ ಕೈ ಹಾಕಲು ಹೋಗಿ ಹಾವು ಕಚ್ಚಿಸಿಕೊಂಡು ಜೀವಬಿಟ್ಟ ಘಟನೆಗಳ ಜೊತೆಗೆ ಸಾಗುವಾನಿ,ಬೀಟೆ,ತೇಗ ಮತ್ತು ಗಂಧದಂತಹ ಬೆಲೆ ಬಾಳು ಕಟ್ಟಿಗೆ ಹಾಗೂ ಕಿಟಕಿ ಬಾಗಿಲ ಚೌಕಟ್ಟುಗಳನ್ನ ಕದ್ದು ತೆಂಗಿನ ಗರಿಕೆಯ ನಡುವೆ ಇರಿಸಿ ಬೆಂಕಿ ಇಟ್ಟ ಹುಡುಗರು ಆ ನಂತರ ದಂಡ ಕಟ್ಟಬೇಕಾದ ಘಟನೆಗಳನ್ನು ಕೂಡ ಹತ್ತಿರದಿಂದ ಕಂಡಿರುವ ಮತ್ತು ಆ ಘಟನೆಗಳೆಲ್ಲ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವಾಗ ಜಸ್ಟ್ ವಿಷ್ ಯೂ ಹ್ಯಾಪಿ ಹೋಳಿ ಅಂದರೆ ತಪ್ಪಾದೀತು ಅಲ್ಲವಾ??

ಹೋಳಿ ಹಬ್ಬವನ್ನು ಆಚರಿಸುವದು ಹಿಂದೂ ಸಂಪ್ರದಾಯ,
ಕಾಮದಹನ ಅನ್ನುವದು ನಮ್ಮೊಳಗಿನ ಕಾಮ,ಕ್ರೋಧ ದ್ವೇಷ,ಮತ್ಸರಗಳನ್ನ ದಹಿಸುವದರ ಪ್ರತೀಕ ಅನ್ನುವದನ್ನ ನಮ್ಮ ಹಿರಿಯರಿಂದ ಕೇಳಿರುವ ನಾನು ಇವತ್ತಷ್ಟೇ ಬೆಳಗಿನ ಜಾವ ಅಂಗಳದ ಕಸಗುಡಿಸಿ ಮನೆಯ ಮುಂಭಾಗದಲ್ಲಿ ನೆಲಕ್ಕೆ ನೀರು ಚಿಮುಕಿಸಿ ರಂಗೋಲಿ ಹಾಕಿ ಒಂದಕ್ಕೊಂದು ಆಧಾರವಾಗಿಸಿ ಇಟ್ಟ ಐದು ಸೆಗಣಿಯ ಬೆರಣಿಗಳಿಗೆ ಔಡಲ ಟೊಂಗೆಯೊಂದನ್ನ ಮಧ್ಯದಲ್ಲಿ ಸಿಕ್ಕಿಸಿ ಅದಕ್ಕೆ ಐದು ಸುತ್ತು ದಾರದ ನೂಲು ಸುತ್ತಿ ಅರಿಸಿನ-ಕುಂಕುಮ ಹಚ್ಚಿ,ಅಗರಬತ್ತಿಯನ್ನ ಭಕ್ತಿಯಿಂದ ಬೆಳಗಿ ತುಪ್ಪ ಸುರಿದು ಬೆಂಕಿ ಹೊತ್ತಿಸಿ ಸಂಪ್ರದಾಯದಂತೆ ಬಾಯಿ ಬಡಿದುಕೊಳ್ಳುವ ಮುನ್ನ ಯಾಕೋ ಇದೆಲ್ಲ ನೆನಪಾಯಿತು.

ಅಂದ ಹಾಗೆ ನಮ್ಮ ಹಬ್ಬ ಮತ್ತು ಆಚರಣೆಗಳು ಬೇರೆಯವರಿಗೆ ತೊಂದರೆ ಉಂಟು ಮಾಡದಿರಲಿ,ಮತ್ತೊಬ್ಬರಿಗೆ ಅಂಧ ಶ್ರದ್ದೆ ಅನ್ನಿಸುವ ಕೆಲವು ಆಚರಣೆಗಳ ಹಿಂದಿನ ಪೌರಾಣಿಕ ಮತ್ತು ಸಾಂಪ್ರದಾಯಿಕ ಆಚರಣೆಯ ವಿವರಗಳು ಈಗಿನ ತಲೆಮಾರಿಗೂ ತಲುಪುವಂತಾಗಿ ಹಬ್ಬಗಳು ಅರ್ಥಪೂರ್ಣ ವಾಗಿ ಆಚರಣೆ ಅಗಲಿ ಅನ್ನುವ ಆಶಯದೊಂದಿಗೆ,

ಸಾಧ್ಯವಾದಷ್ಟು ನೈಸರ್ಗಿಕ ಬಣ್ಣಗಳನ್ನೇ ಬಳಸಿ ರಂಗಪಂಚಮಿ ಆಚರಿಸಿ,ಸಮಾಜದ ಶಾಂತಿ ಸೌಹಾರ್ದತೆಗೆ ಸಹಕರಿಸುತ್ತ ರಂಗಪಂಚಮಿಯ ದಿನ ಆಗಬಹುದಾದ ಅಚಾತುರ್ಯಗಳು ಘಟಿಸದಂತೆ ಜಾಗ್ರತೆ ವಹಿಸಿ ಅನ್ನುವ ಮನವಿಯೊಂದಿಗೆ…

ವಿಷ್ ಯೂ ಹ್ಯಾಪಿ ಹೋಳಿ… ಹೋಲಿಕಾ ದಹನ, ಕಾಮದಹನ ಮತ್ತು ರಂಗಪಂಚಮಿಯ ಹಾರ್ದಿಕ ಶುಭಾಷಯಗಳು…

ಬರಹ :ದೀಪಕ್ ಶಿಂಧೇ

           ಪ್ರಜಾ ಟಿವಿ ವರದಿಗಾರರು

           ಚಿಕ್ಕೋಡಿ