ರಾಮ್ಯಾ ಮಗನ… ನಿನ್ನಿ ಹೋಮ್ ವರ್ಕ್ ಯಾಕ್ ಮಾಡಿಲ್ಲ ಹಿಡಿ ಕೈ ಮುಂದ್ ಮಾಡು… ಅಂದ ಗಣೀತದ ಮೇಷ್ಟ್ರು ಚಾಬೂಕದಂತಹ ಚಾಟಿಯಿಂದ ಹೊಡೆಯುದ್ರೊಳಗ ಯವ್ವಾ ಅಂತ ಚೀರಿದ ರಾಮ್ಯಾ ಕೈಗೆ ಎಟು ಬಿದ್ದ ಜಾಗ ಕೆಂಪಗಾಗಿ ಉರಿ ಹತ್ತಿದಂತಾದ ತನ್ನ ಮುಂಗೈಯನ್ನು ಗಾಳಿಯಲ್ಲಿ ಅಲ್ಲಾಡಿಸುತ್ತ ಇರುವಾಗಲೇ ಹಿಡಿ ಆ ಕೈ ಹಿಡಿ ಅಂದ್ರು ಶಿಂಧೇ ಮಾಸ್ತರ್ರು…
ಹೋಗ್ಲಿ ಬಿಡ್ರಿ ಸರ್ ಅಂವ ನಿನ್ನಿ ಸಾಲಿಗಿ ಬಂದಿಲ್ಲರಿ ಪಾಪ…ಅಂತ ಹುಡುಗರ ಬೆಂಚಿನೊಳಗಿಂದ ಧ್ವನಿಯೊಂದು ತೇಲಿ ಬಂತು… ಹೋಗು ಕುಂಡರ್ ಹೋಗು ಮಗನ…ನಾಳೆ ಪೇರೆಂಟ್ಸ್ ಲೆಟರ್ ತಗೊಂಡ್ ಬಾ ನೋಡು ಅನ್ನುತ್ತಿದ್ದಂತೆಯೇ ರಾಮ್ಯಾನ ಮುಖ ಸದ್ಯಕ್ಕೆ ಬಚಾವಾದೆ ಅಂತ ಒಂದು ರೂಪಾಯಿಯಷ್ಟು ಅಗಲಕ್ಕೆ ಅರಳಿದ್ದು ಹುಡಗರ ಗುಂಪಿನ ಕೆಲವರಿಗಷ್ಟೇ ಕಾಣಿಸಿ ಮರೆಯಾಯಿತು…
ಏ ಓಡ್ರೋ…ಓಡ್ರಿ ಕುಲಕರ್ಣಿ ಟೀಚರ್ ಬಂದ್ರು…ನೋಡಿದ್ರ ನಮ್ ಹೆಣಾನ ಹಾಕ್ತಾರ ಮಲ್ಯಾ ಏ ಮಗನ ಓಡೋ…ಈ ಕುಂಟ್ ರಾಜಾನ ತರೂದ್ ಬ್ಯಾಡ ಅನ್ನಿ ಮಕ್ಕಳರ‌್ಯಾ ನೀವೆಲ್ಲಿ ಕೇಳ್ತೀರಿ?? ಟೀಚರ್ ನೋಡ್ಯಾರ ಈಗ ನಮ್ಮನ್ನ ಅಂತ ಕೆಂಚ‌್ಯಾ ಅಲವತ್ತು ಕೊಳ್ಳತೊಡಗಿದ್ದರೆ ಶಾಲೆಯಿಂದ ಇನ್ನೂರು ಅಡಿ ದೂರದ ನ್ಯೂ ಗ್ರೌಂಡಿನಲ್ಲಿ ಮದ್ಯಾಹ್ನದ ಊಟದ ವಿರಾಮದ ಬಳಿಕ ಮ್ಯಾಥೆಮೆಟಿಕ್ಸ್ ಮತ್ತು ಸೈಯನ್ಸ್ ಕ್ಲಾಸುಗಳನ್ನ ಬಂಕ್ ಮಾಡಿ ಕ್ರಿಕೇಟ್ ಆಡುತ್ತಿದ್ದ ಹುಡುಗರು ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಎದ್ದು ಬಿದ್ದು ದಿಕ್ಕಾಪಾಲಾಗಿ ಓಡತೊಡಗಿದ್ದರು..
ಬಹಳ ವರ್ಷಗಳ ಬಳಿಕ ಗ್ಯಾರೇಜೊಂದರಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಹಳೆಯ ಗೆಳೆಯ ಮಸ್ತಾನನಿಗೆ ಮತ್ತೇನ್ ಪಾ ದೋಸ್ತ ಅರಾಮ ಅದಿ?? ಅಂದಾಗ ಎನ್ ಮಾಡುದ್ ದೋಸ್ತ… ಅವನವ್ವನ್ ನಾವೆಲ್ಲಾ ಸಾಲಿ ಕಲಿಯೂ ಟೈಮಿನ್ಯಾಗ್ ಕಲಿ ಲಿಲ್ಲೋ ಪಾ ಅದಕ್ ಹಿಂಗ್ ಆದೀವು ನಿಮಗೆನ್ ಪಾ ಚಲೋ ಕಲ್ತೀರಿ ಸಂಗ್ಯಾ ಗೌರ್ಮೆಂಟ್ ನೌಕರಿ ಮಾಡಾತಾನು,ಪರಸ್ಯಾ ಬ್ಯಾಂಕ್ ಮ್ಯಾನೇಜರ್ ಆಗ್ಯಾನೂ ಪುಟ್ಯಾ ಇಂಜನೇರ್ ಆಗ್ಯಾನು ನೀವ್ ಎಲ್ಲಾ ಡ್ಯೂಕ್ ಗಾಡಿ ತಗೊಂಡ್ ಚೈನ್ಯಾಗ್ ಅದೀರಿ ಬಿಡೋಪಾ ಅಂದಾಗ ಬೈಕು ಸರ್ವಿಸ್ಸಿಗೆ ತಂದಿದ್ದ ಶ್ರೀಶೈಲ… ಹಂಗ್ಯಾನಿಲ್ಲೋ ದೋಸ್ತ ಆದ್ರೂ ಅವಾಗ್ ನೀ ಕ್ಲಾಸ್ ತಪ್ಪಿಸಿ ಭಾಳ ದೊಡ್ ತಪ್ ಮಾಡಿದಿ ನೋಡು…. ಕಡೀಕ ನಮ್ ಲೋಕುರ್ ಮಾಸ್ತರ್ ಮಾತ್ ಕೇಳಿದ್ರ ಹತ್ತನೆತೆರೆ ಪಾಸ್ ಆಗತಿದ್ದಿ ಅಂದ..
ಹೀಗೆ ಎಷ್ಟೋ ಜನ ತಂದೆ ತಾಯಿಯ ಮಕ್ಕಳು ಶಾಲೆಗೆ ಚಕ್ಕರ್ ಊಟಕ್ಕೆ ಹಾಜರ್ ಅನ್ನುವಂತೆ ಬದುಕುವದನ್ನ ನೋಡಿದಾಗ,ಮತ್ತು ಸ್ಕೂಲು ಅಥವಾ ಕಾಲೇಜು ಬ್ಯಾಗುಗಳೊಂದಿಗೆ ಅಲ್ಲಲ್ಲಿ ಪೋಲಿ ಅಲೆಯುವದನ್ನ ನೋಡಿದಾಗೆಲ್ಲ ಎಂತಹ ಸುಂದರ ಬದುಕನ್ನ ಅವರೆಲ್ಲ ಹಾಳು ಮಾಡಿಕೊಳ್ಳುತ್ತಿದ್ದಾರೆ ಅಲ್ಲವಾ?? ಅನ್ನಿಸಿದರೂ ಹೋಗ್ಲಿ ಬಿಡಿ ಬಾಸು ಕಂಡೋರ್ ಮನೆ ಮಕ್ಕಳ ವಿಷಯಾ ನಮಗ್ಯಾಕೇ?? ಅನ್ನುತ್ತಾನೆ ನನ್ನ ಜೊತೆಗಿರುವ ಮತ್ತೊಬ್ಬ ಗೆಳೆಯ ಮಹೇಶ್ ಅಡಹಳ್ಳಿ.
ಆರಂಭದಲ್ಲಿ ಗಣಿತದ ಆಲ್ಫಾ,ಸಿಗ್ಮಾ,ಬೀಟಾ,ಮತ್ತು ಪೈಥಾಗೋರಸ್ ಪ್ರಮೇಯಗಳು ವಿಜ್ಞಾನದ ನ್ಯೂಟನ್ನನ ಚಲನೆಯ ನಿಯಮಗಳು, ಮತ್ತು ಇಂಗ್ಲಿಷಿನ ವೆಕಾಬುಲರಿಗಳನ್ನ ಅರಗಿಸಿಕೊಳ್ಳಲಾಗದ ಅಥವಾ ಅವು ತಮಗೆಲ್ಲ ತಲೆಯ ಮೇಲಿನಿಂದ ಬೌನ್ಸ ಆಗುವ ಅರ್ಥವಾಗದ ಕಬ್ಬಿಣದ ಕಡಲೆಗಳು ಅನ್ನಿಸಿದಾಗಲೋ,ಅಥವಾ ಯಾವುದೋ ಅನುಭವಿ ಮೇಷ್ಟ್ರು ತುಂಬಾ ಸ್ಟ್ರಿಕ್ಟು ಅನ್ನುವ ಕಾರಣಕ್ಕೊ ,ಮನೆಯಲ್ಲಿ ಅಪ್ಪ ಅಮ್ಮನ ಬಟ್ಟೆ ನೇಯುವ ಕೆಲಸ,ಗಾರೆ ಕೆಲಸ,ಜಮೀನು ಕೆಲಸಗಳಲ್ಲಿ ಆಗಾಗ ಕೈ ಜೋಡಿಸಿ ದಣಿದ ಕಾರಣಕ್ಕೋ ಮಧ್ಯಾಹ್ನದ ಊಟದ ಬಳಿಕ ಕಣ್ಣುಗಳು ತೂಕಡಿಸುತ್ತವೆ ಅನ್ನುವ ಕಾರಣಕ್ಕೋ ಆರಂಭವಾಗುವ ಕ್ಲಾಸ್ ಬಂಕ್ ಗಳು ನಿಧಾನಕ್ಕೆ ಚಟವಾಗಿ ಪರಿಣಮಿಸಿ ಅದೆಷ್ಟೋ ವಿದ್ಯಾರ್ಥಿಗಳ ಸುಂದರ ಬದುಕಿನ ಇಡೀ ಭವಿಷ್ಯವನ್ನೇ ನುಂಗಿ ಹಾಕಿ ಬಿಡುತ್ತವೆ.
ಅದರಲ್ಲೂ ಲಾಸ್ಟ್ ಬೇಂಚರ್ಸ ಅನ್ನುವ ಹಣೆಪಟ್ಟಿ ಬಿದ್ದರಂತೂ ಮುಗೀತು… ಸೀನಾ ಅಲಿಯಾಸ್ ಬಂಕ್ ಸೀನಾ,ರಾಜು ಅಲಿಯಾಸ್ ಡಲ್ ರಾಜಾ,ಕಿವಿ ಮಂದ ಕೇಳುವ ಜೋಯಿಸರ ಹುಡುಗ ರಾಘು ಅಲಿಯಾಸ್ ಮಂದ್ ರಾಘ್ಯಾ ಮತ್ತು ಪೂರ್ಣ ಪ್ರಮಾಣದಲ್ಲಿ ನಾಲಗೆ ಹೊರಳದೆ ತೊದಲುತ್ತ ಮಾತನಾಡುವ ಗೆದಲ್ ರಾಮ್ಯಾ ಅಲಿಯಾಸ್ ಗಿಣಿ ರಾಮ್ಯಾ ಅನ್ನುವ ಉಪನಾಮಗಳ ಜೊತೆಗೆ ಇವರಿಗಿಂತಲೂ ಮೊದಲೇ ದಾರಿತಪ್ಪಿದ ಮಕ್ಕಳು ಇವರನ್ನ ಅಡ್ಡ ಹಾದಿಯ ಖೆಡ್ಡಕ್ಕೆ ಕೆಡವಲು ಸನ್ನದ್ಧಾರಾಗಿಯೇ ನಿಂತಿರುತ್ತಾರೆ.
ಆರಂಭದಲ್ಲಿ ಒಂದ್ ದಮ್ ಅಷ್ಟೇ ಮಚ್ಚಾ ಒಳ್ಳೆ ಕಿಕ್ ಕೊಡುತ್ತೆ ಅನ್ನುವದರಿಂದ ಹಿಡಿದು,ಏನೂ ಆಗಲ್ ಮಚ್ಚಾ ಇದ್ನ ಹುಡುಗೀರು ಕೂಡ ಸೇದ್ತಾರೆ ಇದು ಲೈಟ್ಸ್ ಕಣೋಲೇ ಗುಬಾಲ್ ಅಂತ ಸಿಗರೇಟಿನಿಂದ ಆರಂಭವಾಗಿ ಗಾಂಜಾ,ಅಫೀಮು,ಬ್ರೌನ್ ಶುಗರ್ ನಂತಹ ಡ್ರಗ್ಸ್ ಗಳಿಗೆ ಮಕ್ಕಳು ಅಡಿಕ್ಟ ಆದರಂತೂ ಮುಗಿದೆ ಹೋಯಿತು.
ಗೆಳೆಯನೊಬ್ಬ ತನ್ನ ಐವತ್ತು ರೂಪಾಯಿ ವಾಪಸ್ ಕೊಡ್ಲಿಲ್ಲ ಅಂತಲೋ ತನ್ನ ಗರ್ಲ್ ಪ್ರೆಂಡ್ ಗೆ ಯಾವನೋ ಸುಮ್ಮನೇ ಸತಾಯಿಸಿದ ಅಂತಲೋ ಅಥವಾ ಟ್ರಯಾಂಗಲ್ ಲವ್ ಸ್ಟೋರಿ ಅಂತಲೋ ಕೊಲೆಗಳಲ್ಲಿ ಪರ್ಯಾವಸಾನ ಆಗುವ ಅದೆಷ್ಟೋ ಘಟನೆಗಳನ್ನ ಅವಲೋಕಿಸಿ ನೋಡಿದಾಗ ಕೊಲೆಯಾದವನೋ,ಚಟಕ್ಕೆ ದುಡ್ಡು ಹೊಂದಿಸಲು ಪಿಕ್ ಪಾಕೇಟರ್ ಆದವನೋ,ಹುಡುಗರ ಗುಂಪಿನೊಂದಿಗೆ ಚಾರ್ಮಾಡಿ ಘಾಟು,ಅಥವಾ ಯಾವುದೋ ಫಾಲ್ಸು ಅಂತ ಒಂಟಿಯಾಗಿ ಹೋದ ಹುಡುಗಿಯ ಮೇಲೆ ಕುಡಿದ ಮತ್ತಿನಲ್ಲಿ ಅವಳದೇ ಕ್ಲಾಸಿನ ಹುಡುಗರು ಮುಗಿ ಬಿದ್ದು ಸಾಮೂಹಿಕ ಅತ್ಯಾಚಾರ ಮಾಡಿ ಜೈಲು ಸೇರಿದ ಘಟನೆಯನ್ನೋ ಕೇಳಿದಾಗೆಲ್ಲ ನನ್ನ ಮನಸ್ಸು ತೀವ್ರ ಆಘಾತಕ್ಕೆ ಒಳಗಾಗುತ್ತದೆ.
ಕಾಟೇರ ನೋಡೋಣ ಬರ್ತಿಯಾ?? ಅದಕ್ಕಿಂತ ಯುವ ಚೆನ್ನಾಗಿದೆ ಕಣಾ…ರಿಂಕಿ ಗೋಬಿ ಕೊಡಸ್ತಿನಿ ಬಾರೇ,… ಪುಷ್ಪಾ… ಹುಷಾರಿಲ್ಲ ಮಿಸ್ ಯಾಕೋ ತಲೆ ತುಂಬಾ ನೋಯ್ತಾ ಇದೆ ಅಂತ ಎದ್ ಬರ್ತಿಯಾ?? ಪ್ಲೀಜ್.
ಗೇಟ್ ಹತ್ರಾ ಕಾಯ್ತಾ ಇರ್ತಿನೀ ಬಂದ್ ಬಿಡು…
ಏ ಸುಧೀ ಪಾನಿ ಪೂರಿ ಫಿಕ್ಸಾ? ಅಯ್ಯೋ ಯಾರ್ ಹತ್ರನಾದ್ರೂ ನೋಟ್ಸ ತಗೊಂಡ್ರೆ ಆಯ್ತು ಬಾರೇ ಹೋಗೋಣಾ ಅಲ್ಲಿ ರೀಲ್ಸ್ ಎಲ್ಲಾ ಎಷ್ಟು ಚೆನ್ನಾಗ್ ಬರುತ್ತೆ ಗೊತ್ತಾ? ಅಂತ ಕ್ಲಾಸು ಬಂಕ್ ಮಾಡುವ ಅದೆಷ್ಟೋ ಹದಿ ಹರೆಯದ ಯುವಕ ಯುವತಿಯರು ಇತ್ತ ತಾವಿರುವ ಹಾಸ್ಟೇಲಿನ ವಾರ್ಡನ್ನು, ಮಕ್ಕಳು ಓದುತ್ತಿರುವ ಶಾಲೆ ಅಥವಾ ಕಾಲೇಜಿನ ಪ್ರಿನ್ಸಿ ಅಥವಾ ತಮ್ಮ ಪೋಷಕರಿಗೂ ಹೇಳದೆ ಎಲ್ಲೋ ಇಂದು ಕಡೆ ಹೋಗಿ ಈಜು ಬಾರದೆ ಮುಳುಗಿದಾಗಲೋ,ಕಾಲು ಜಾರಿ ಬಿದ್ದಾಗಲೋ,ವ್ಹೀಲಿಂಗ್ ಮಾಡಲು ಹೋಗಿ ಐಸಿಯೂ ಸೇರಿದಾಗಲೋ,ಟ್ರಿಪ್ಪಲ್ ರೈಡ್ ಮಾಡುವಾಗ ಟ್ರಾಫಿಕ್ ಪೋಲಿಸರ ಕೈಗೆ ಸಿಕ್ಕು ಬಿದ್ದಾಗಲೋ ತಮ್ಮ ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಅಂತ ಕಣ್ಣೀರು ಹಾಕುವ ಪೋಷಕರು ನಮ್ಮನ್ನ ಕೇಳದೆ ಅದ್ ಹೆಂಗ್ ಸಾರ್ ಬಿಟ್ರಿ ಹೊರಗಡೆ ಅಂತ ಕಾಲೇಜು ಪ್ರನ್ಸಿಪಲ್ ಮತ್ತು ಹಾಸ್ಟೇಲ್ ವಾರ್ಡನ್ ಮೇಲೆ ಏರಿ ಹೋಗುವ ಪೋಷಕರು ಗಮನಿಸಬೇಕಾದ ಅಂಶವೆಂದರೆ ಹೇಗೋ ಒಂದು ಫೇಮಸ್ ಕಾಲೇಜು ಸ್ಕೂಲಿಗೆ ಅಡ್ಮಿಷನ್ ಕೊಡಿಸಿದರೆ ಪಿ.ಜಿ ಅಥವಾ ಹಾಸ್ಟೇಲ್ ಗಳಲ್ಲಿ ಮಕ್ಕಳನ್ನ ಇರಿಸಿದರೆ ಅಲ್ಲಿಗೆ ನಿಮ್ಮ ಕೆಲಸ ಮುಗಿದು ಹೋಗುವದಿಲ್ಲ ಜವಾಬ್ದಾರಿ ಅನ್ನುವದು ಆರಂಭವಾಗುವದೇ ಆ ಕ್ಷಣದಿಂದ ಅನ್ನುವದನ್ನ ಗಮನದಲ್ಲಿ ಇಟ್ಟುಕೊಳ್ಳಲೇ ಬೇಕು
ಈಗೆಲ್ಲ ಇರುವ ಇಂಟರ್ನಲ್ ಮಾರ್ಕ್ಸ ಒಂದಷ್ಟು ಹುಡುಗರನ್ನ ದಿನವೂ ತಪ್ಪದೆ ಶಾಲೆ,ಕಾಲೇಜಿಗೆ ಹಾಜರಾತಿ ಕೊಡಿಸುವಲ್ಲಿ ಒಂದಷ್ಟು ಸಹಕಾರಿ ಆಗಿದೆಯಾದರೂ ಕಡ್ಡಾಯವಾಗಿ ಬಯೋ ಮೆಟ್ರಿಕ್ ಹಾಜರಿ ಮತ್ತು ಸಿಸಿ ಕ್ಯಾಮರಾದ ಕಣ್ಗಾವಲು ಇದ್ದರಷ್ಟೇ ಇಂದಿನ ಮಕ್ಕಳು ಮುಂದಿನ ಭಾವಿ ಪ್ರಜೆಗಳಾಗಿ ಹೊರ ಹೊಮ್ಮಬಹುದು.
ಅದರಲ್ಲೂ ಮಕ್ಕಳಿಗೆ ಆಸಕ್ತಿಯೇ ಇಲ್ಲದ ಕೋರ್ಸುಗಳಿಗೆ ಅವರು ಬೇಡ ಮಾಮ್,ನೋ ಡ್ಯಾಡ್ ಐ ಯಾಮ್ ನಾಟ್ ಇಂಟ್ರೆಸ್ಟೆಡ್ ಅಂದರೂ ನೀನು ಇದನ್ನೆ ಮಾಡು ಅಂತ ಅವರಿಗಿಷ್ಟವಿಲ್ಲದ ಕೋರ್ಸುಗಳಿಗೆ ಲಕ್ಷಾಂತರ ಡೋನೆಷನ್ ಸುರಿದು ಅಡ್ಮಿಷನ್ ಕೊಡಿಸುವ ಅಪ್ಪ ಅಮ್ಮಂದಿರು ತಮ್ಮ ಮಗ ಅಥವಾ ಮಗಳು ದಿನವೂ ಎಲ್ಲ ತರಗತಿಗಳಿಗೆ ಹಾಜರ್ ಆಗ್ತಾ ಇದ್ದಾರಾ?? ಅಥವಾ ಯಾವತ್ತಾದರೂ ತಮಗೂ ತಿಳಿಯದಂತೆ ಕ್ಲಾಸ್ ಬಂಕ್ ಮಾಡಿ ಪೋಲಿ ಅಲೆಯುತ್ತಿದ್ದಾರಾ ಅನ್ನುವದರ ಬಗ್ಗೆ ಒಂದಷ್ಟು ಕಾಳಜಿ ತೋರಿದಾಗಲಷ್ಟೇ ಏರು ಯವ್ವನದ ನಶೆಯಲ್ಲಿ ಪಾನಮತ್ತರಾದಂತೆ ಭಾವನೆಗಳ ಮೇಲೆ ಹಿಡಿತ ಸಾಧಿಸಲಾಗದ ಮಕ್ಕಳನ್ನ ಸರಿ ದಾರಿಯಲ್ಲಿ ನಡೆಸುವದು ಸಾಧ್ಯವಾದೀತು..
ಇಲ್ಲವಾದರೆ ಈಗಿನ ಅದೆಷ್ಟೋ ಬ್ಲಾಗರ್ ಮತ್ತು ವ್ಲಾಗಿನ ಜನರು ಹಣ ಗಳಿಸುತ್ತಿದ್ದಾರೆ ಅಂತ ನಂಬಿಕೊಂಡು ತಾವೂ ಕೂಡ ಅದನ್ನೆ ಮಾಡ್ತೀವಿ ಅಂತ ಹೊರಟು ಎಂತಹ ಕಂಟೇಂಟ್ ಜನರಿಗೆ ಇಷ್ಟವಾಗುತ್ತದೆ ಅನ್ನುವ ಪರಿಜ್ಞಾನವೂ ಇಲ್ಲದೇ ವರ್ಷಗಟ್ಟಲೆ ಒಂದೆರಡು ಸಾವಿರದಲ್ಲಿ ಸಿಗುವ ಅನ್ ಲಿಮಿಟೆಡ್ ಡಾಟಾ ಮತ್ತು ಅಪ್ಪ ಅಮ್ಮ ಸಲುಗೆಯಿಂದ ಕೊಡುವ ಪಾಕೇಟ್ ಮನಿಯನ್ನೇ ನಂಬಿಕೊಂಡು ತಮಗೆ ಗೊತ್ತಿಲ್ಲದ ಊರು,ಬೆಟ್ಟ,ಗುಡ್ಡ, ಕಾಡು,ಅಂತೆಲ್ಲ ಅಲೆಯಲು ಹೊರಟು ನಗೆಪಾಲಿಗೆ ಈಡಾಗುವ ಮತ್ತು ಸ್ವಘೋಷಿ ಸಮಾಜ ಸುಧಾರಕರೆಂಬ ಟೀಮಿನ ಪೇಜುಗಳಲ್ಲಿ ಟ್ರೋಲ್ ಆಗುವ ಮಕ್ಕಳ ಕಿವಿ ಹಿಂಡಲು ಆ ಹರಿ ಬ್ರಹ್ಮಣೇ ಬರಬೇಕಾದೀತು
ಈಗಲೂ ಬೆಂಗಳೂರಿನ ಕಬ್ಬನ್ ಪಾರ್ಕ್,ಲಾಲಭಾಗ ಮತ್ತು ಧಾರವಾಡ ಕೆ.ಸಿ ಪಾರ್ಕ್, ಆಝಾದ್ ಪಾರ್ಕ್ ಅಥಣಿಯ ಫಾರೆಸ್ಟ್ ಪಾರ್ಕ್ ಮತ್ಯಾವದೋ ಊರಿನ ಇನ್ಯಾವದೋ ಪಾರ್ಕಿನ ಬೆಂಚುಗಳ ಮೇಲೆ,ಅಥವಾ ಹುಲ್ಲು ಹಾಸಿನ ಮೇಲೆ ಬಿದ್ದುಕೊಂಡ,ಅಥವಾ ಮರಕೋತಿ, ಹೈಡ್ ಯಾಂಡ್ ಸೀಕ್,ಐಸ್ಪೈಸ್ ಆಡುತ್ತಿರುವ ಒಂದಷ್ಟು ಪೋಲಿಬಿದ್ದ ಹುಡುಗ ಹುಡುಗಿಯರಿಗೆ ಸುಮ್ಮನೇ ಒಂದು ಕಿವಿ ಮಾತು ಹೇಳಬೇಕು ಅನ್ನಿಸಿದರೂ ಕೂಡ ಯಾಕೋ ಹೇಗೆ ಹೇಳಬೇಕು ಅಥವಾ ಹೇಳಿದರೆ ಅವರು ಕೇಳಬಹುದಾ ಅನ್ನುವ ಒಂದಷ್ಟು ಜಿಜ್ಞಾಸೆಯೊಂದಿಗೆ ಬರೆಯಲು ಕುಳಿತವನಿಗೆ ಇಷ್ಟೆಲ್ಲಾ ನೆನಪಾಯಿತು.
ಹೀಗೆ ನಮ್ಮ ನಿಮ್ಮ ಮುದ್ದು ಮಕ್ಕಳು, ಅಥವಾ ಅಕ್ಕಪಕ್ಕದವರ ಮಕ್ಕಳು ಕ್ಲಾಸು ಬಂಕ್ ಮಾಡಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತ ಒಂದು ಹಂತಕ್ಕೂ ತಲುಪಲಾಗದೆ ಹಾಳಾಗದಂತೆ ಮತ್ತು
ಬದುಕೆಂಬ ಸಮುದ್ರದಲ್ಲಿ ಲಂಗರು ಬಿಚ್ಚಿದ ಹುಟ್ಟುಗಳಿಲ್ಲದ ಹಾಯಿ ದೋಣಿಯೊಂದು ಎಲ್ಲೋ ತೇಲಿಹೋಗಿ ಮುಳುಗಿದಂತೆ ಆಗುವ ಮುನ್ನ ಇನ್ನಾದರೂ ಎಚ್ಚೆತ್ತುಕೊಳ್ಳೋಣ ಏನಂತೀರಿ??
ಬರಹ : ದೀಪಕ್ ಶಿಂಧೆ
ಪ್ರಜಾ ಟಿವಿ ವರದಿಗಾರರು ಚಿಕ್ಕೋಡಿ