ರಾಮಾಯಣದಿಂದ ಮಹಾಭಾರತದ ಆದಿಯಾಗಿ ನಾಡಿನಾದ್ಯಂತ ಹನುಮನ ಚರಿತ್ರೆಯನ್ನು ಮಹಾ ಗ್ರಂಥದಲ್ಲಿ ಕಾಣುತ್ತೇವೆ. ಹನುಮನ ಆರಾಧಕರ ಸಂಖ್ಯೆಗೇನು ಕಡಿಮೆ ಇಲ್ಲ. ಹಾಗಂತ ನಂಬಿದ ಭಕ್ತರ ನಂಬಿಕೆಯನ್ನು ಹುಸಿ ಮಾಡದೆ ಆಂಜನೇಯನನ್ನು ನೆನೆದರೆ ಸಾಕು ಕಷ್ಟಗಳೆಲ್ಲ ಪರಿಹಾರವಾಗುತ್ತದೆ ಎಂಬ ಅಗಾಧವಾದ ನಂಬಿಕೆ ಇದೆ. ಹಾಗೆ ಉತ್ತರ ಕರ್ನಾಟಕ ಭಾಗದ ಹಲವಾರು ಶಕ್ತಿಶಾಲಿ ಆಂಜನೇಯ ದೇಗುಲಗಳ ಪೈಕಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದ ಆಂಜನೇಯ ದೇವಸ್ಥಾನ ಕೂಡ ಒಂದು. ಕೊಣ್ಣೂರಿನ ಆಂಜನೇಯ ದೇವಸ್ಥಾನ ತನ್ನದೇ ಆದ ಪ್ರತಿಷ್ಠೆ ಹೊಂದಿದೆ. ಭಕ್ತರು ಯಾವುದಾದರೂ ಶುಭ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಈ ಶಕ್ತಿಶಾಲಿ ಆಂಜನೇಯನ ಬಳಿ ಬಂದು ಕವಲು ಕೇಳುವ ಮೂಲಕ ಅವರು ಮಾಡುವ ಕೆಲಸ ಯಶಸ್ಸು ಆಗುವುದೋ? ಇಲ್ಲವೋ? ಎಂದು ಕೇಳುವ ವಾಡಿಕೆ ನಮ್ಮ ಪೂರ್ವಜರ ಕಾಲದಿಂದಲೂ ಬಂದಿದೆ.
ಬೆಳಗಾವಿ ಅ.15: ಹೌದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿರುವ ಆಂಜನೇಯ ದೇವಸ್ಥಾನ ಅದರದೇ ಆದ ವಿಶೇಷತೆಯನ್ನು ಒಳಗೊಂಡಿದೆ. ನೂರಾರು ವರ್ಷಗಳ ಹಿಂದಿನ ಈ ದೇವಸ್ಥಾನದ ವಿಶೇಷತೆ ಎಂದರೆ ಕವಲು ನೀಡುವುದು. ಇಂತಹ ಇತಿಹಾಸ ಪ್ರಸಿದ್ಧ ಆಂಜನೇಯನಿಗೆ ಇಂದು ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ಬೆಳಗಾವಿ ಮೂಲದ ಭಕ್ತರೊಬ್ಬರು 5 ಕೆಜಿ ಬೆಣ್ಣೆ ಅಲಂಕಾರದ ವಿಶೇಷ ಪೂಜೆಯನ್ನು ಸಲ್ಲಿಸಿದರು. ಆಂಜನೇಯನ ಸಂಪೂರ್ಣ ವಿಗ್ರಹವನ್ನು ಸುಮಾರು ಎರಡು ಗಂಟೆಗಳ ಕಾಲ ಬೆಣ್ಣೆಯಿಂದ ಅಲಂಕೃತಗೊಳಿಸಿದರು. ಈ ವಿಶೇಷ ಪೂಜೆಯನ್ನು ಆಂಜನೇಯನ ಅರ್ಚಕರಾದ ಆನಂದ ಪೂಜೇರಿ, ರಾಜು ಪೂಜೇರಿ, ಅನಿಲ್ ಪೂಜೇರಿ, ಹಾಗೂ ಇನ್ನು ನಾಲ್ಕೈದು ಜನ ಅರ್ಚಕರಿಂದ ಸತತ ಎರಡು ಗಂಟೆಗಳ ಕಾಲ ಆಂಜನೇಯನ ವಿಗ್ರಹವನ್ನು ಬೆಣ್ಣೆಯ ಮೂಲಕ ಅಲಂಕೃತಗೊಳಿಸಿದರು. ಈ ಬೆಣ್ಣೆ ಅಲಂಕಾರದ ಪೂಜೆ ವಿಶೇಷವಾಗಿದ್ದು ಇಷ್ಟಾರ್ಥ ಸಿದ್ಧಿಗಾಗಿ ಬೆಣ್ಣೆ ಪೂಜೆ, ಬುತ್ತಿ ಪೂಜೆ ಅಂತಹ ವಿಶೇಷ ಪೂಜೆಗಳನ್ನು ಶ್ರಾವಣ ಮಾಸದಲ್ಲಿ ಭಕ್ತರು ಈಡೇರಿಸುತ್ತಾರೆ.
ಕೊಣ್ಣೂರು ಆಂಜನೇಯನ ವಿಶೇಷತೆ:
ರಾಜ್ಯದ ಬಹುತೇಕ ಶಕ್ತಿಶಾಲಿ ಆಂಜನೇಯ ದೇವಸ್ಥಾನಗಳಲ್ಲಿ ಒಂದಾದ ಕೊಣ್ಣೂರು ಆಂಜನೇಯ ದೇವಸ್ಥಾನ ತನ್ನದೇ ಆದ ವಿಶೇಷತೆಯನ್ನು ಹೊಂದಿರುವ ದೇವಸ್ಥಾನ ಇದಾಗಿದ್ದು. ಈ ಆಂಜನೇಯನ ದೇವಸ್ಥಾನಕ್ಕೆ ರಾಜ್ಯದ ಹಲವಾರು ಗ್ರಾಮಗಳಿಂದ ಹಾಗೂ ಮಹಾರಾಷ್ಟ್ರದಿಂದ ಕೂಡ ಭಕ್ತರು ಆಗಮಿಸುತ್ತಾರೆ. ಆಂಜನೇಯನ ವಿಶೇಷತೆ ಎಂದರೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ನಿಟ್ಟಿನಲ್ಲಿ ಹಾಗೂ ಯಾವುದಾದರೂ ಶುಭ ಕಾರ್ಯಗಳನ್ನು ಮತ್ತು ಹೊಲ ಗದ್ದೆಗಳ ಉತ್ತಮ ಬೆಳೆ, ಬೋರ್ವೆಲ್ ಗಳನ್ನು ಹಾಕಿಸುವುದರ ಕುರಿತು ಮತ್ತು ಹಾಗೂ ಮದುವೆ ಶುಭ ಸಮಾರಂಭಗಳ ಆಗು ಹೋಗುಗಳ ಕುರಿತು ವಿದ್ಯಾಭ್ಯಾಸ, ರಾಜಕೀಯ, ನೌಕರಿ, ಆರೋಗ್ಯ ಹೀಗೆ ಮುಂತಾದ ಶುಭ ಕಾರ್ಯಗಳು ಅಂದುಕೊಂಡ ಕಾರ್ಯಗಳು ಯಶಸ್ಸು ಆಗುವುದೋ? ಅಥವಾ ಇಲ್ಲ ಎಂಬುದರ ಕುರಿತು ಕವಲು ನೀಡುವುದು ಈ ಆಂಜನೇಯನ ವಿಶೇಷತೆ. ಈ ಆಂಜನೇಯನ ಕವಲು ಅಂದರೆ ಮುಂಚಿತವಾಗಿ ನೀಡುವ ಶುಭ ಸಂದೇಶ ಇದಾಗಿದ್ದು ಇದನ್ನು ಕೇಳಲು ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಿಂದ ಹಿಡಿದು ಮಹಾರಾಷ್ಟ್ರದವರೆಗು ಈ ಆಂಜನೇಯನ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆಗಮಿಸುತ್ತಾರೆ.
ಕೊಣ್ಣೂರ ಗೋಕಾಕದಿಂದ 10 ಕಿ.ಮೀ. ಬೆಳಗಾವಿಯಿಂದ 65 ಕಿ.ಮೀ. ದೂರದಲ್ಲಿದ್ದು ಈ ಊರಿಗೆ ಸಂಚರಿಸಲು ರೈಲು ಹಾಗೂ ಬಸ್ ಅನುಕೂಲವಿದೆ. ರೈಲಿನ ಮೂಲಕ ಬರಲು ಇಚ್ಚಿಸಿದವರು ಗೋಕಾಕ ರೋಡ ರೈಲು ನಿಲ್ದಾಣದಲ್ಲಿ ಇಳಿದುಕೊಳ್ಳಬೇಕು.