ರಾಜ್ಯದಲ್ಲಿ ನಿನ್ನೆ ಇಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಹವಾಮಾನ ಇಲಾಖೆಯ ತಜ್ಞ ಸಿ ಎಸ್ ಪಾಟೀಲ್ ಅವರು ದಿನಾಂಕ 11 ರವರೆಗೆ ಗುಡುಗು ಮಿಂಚು ಸಹಿತ ಬಿರುಗಾಳಿ ಮಳೆಯಾಗಲಿದೆ ಎಂದು ಹೇಳಿದ್ದರು. ಅದೇ ರೀತಿ ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಹಾಗೂ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಚಿಕ್ಕಮಗಳೂರು ಹಾಸನ್ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದರು ಇವತ್ತಿನಿಂದ ಆರೆಂಜ್ ಅಲರ್ಟ್ ಕೂಡ ಹೇಳಿದ್ದರು. ಆದರೆ ಇದರ ಮಧ್ಯೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಯುವಕನೋರ್ವ ಬಾರಿ ಗಾಳಿ ಮತ್ತು ಮಳೆಗೆ ರಸ್ತೆ ಬದಿಯ ಗಿಡ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೆಳಗಾವಿ ಜೂ.9: ಹೌದು ನಿನ್ನೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಇಂದು ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ಒಬ್ಬ ಯುವಕ ಮರ ಬಿದ್ದು ಸ್ಥಳದಲ್ಲೇ ಬಲಿಯಾಗಿದ್ದಾನೆ. ಕರ್ಲೆ ಗ್ರಾಮದ ಸೋಮನಾಥ ರಾಹುಲ ಮುಚ್ಚಂಡಿಕರ್ (21) ಮೃತ ದುರ್ದೈವಿ. ಇನ್ನು ಮೃತಯುವಕ ಸೋಮನಾಥ್ ಹಾಗೂ ಆತನ ಇಬ್ಬರು ಸ್ನೇಹಿತರು ಒಂದೇ ಬೈಕ್ ಮೇಲೆ ಬೆಳಗಾವಿಗೆ ತೆರಳುತಿದ್ದರು ಇದೇ ವೇಳೆ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಏಕಾಏಕಿ ಬೃಹತ್ ಗಾತ್ರದ ಮರ ಒಂದು ನೆಲಕಪ್ಪಳಿಸಿದೆ, ಅದೇ ಸಮಯದಲ್ಲಿ ಒಂದೇ ಬೈಕ್ನಲ್ಲಿ ಬೆಳಗಾವಿಗೆ ತೆರಳುತ್ತಿದ್ದ ಮೂವರ ಸ್ನೇಹಿತರ ಪೈಕಿ ಸೋಮನಾಥನ ಮೇಲೆ ಮರ ಬಿದ್ದಿರುವುದರಿಂದ ಯುವಕ ಸ್ಥಳದಲ್ಲಿ ಮೃತಪಟ್ಟಿದ್ದು ಇನ್ನುಳಿದ ಇಬ್ಬರ ಸ್ಥಿತಿ ಚಿಂತಾ ಜನಕವಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಕೂಡಲೇ ಸ್ಥಳೀಯರು ದೌಡಾಯಿಸಿ ಬಂದಿದ್ದು ವಿಠ್ಠಲ್ ತಳವಾರ್ ಹಾಗೂ ಸ್ವಪ್ನಿಲ್ ದೇಸಾಯಿ ಇಬ್ಬರನ್ನು ಕೂಡ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ರಸ್ತೆಯಲ್ಲಿದ್ದ ಮರವನ್ನು ತೆರವುಗೊಳಿಸಿ, ಪ್ರಕರಣವನ್ನು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡಿದ್ದಾರೆ. ಇನ್ನೂ ಮೃತಪಟ್ಟ ಯುವಕನ ತಂದೆ ಕಳೆದ ವರ್ಷ ಸಾವನ್ನಪ್ಪಿದ್ದು ಮನೆಯಲ್ಲಿ ತಾಯಿ ಹಾಗೂ ಈತನ ಚಿಕ್ಕ ತಮ್ಮ ಮಾತ್ರ ಇರುವುದು ತಿಳಿದು ಬಂದಿದೆ. ಇತ್ತ ಕಳೆದ ವರ್ಷ ಗಂಡ ಹಾಗೂ ಇಂದು ಮಗನನ್ನು ಕಳೆದುಕೊಂಡ ತಾಯಿಯ ಕೂಗು ಮುಗಿಲು ಮುಟ್ಟಿದೆ.