ಬದಲಾವಣೆಗಾಗಿ ವಿಷಾದಿಸುತ್ತೇವೆ……

ಕ್ಷಮಿಸಿ ನಾವೀಗ ಮೊದಲಿನಂತಿಲ್ಲ
ಸಣ್ಣ ಪುಟ್ಟ ನೋವಿಗೆ ಕಣ್ಣು ತುಂಬಿಕೊಳ್ಳುವದಿಲ್ಲ.
ಖುಷಿಯಾದರೂ ಈಗೀಗ ಕುಣಿದು ಕುಪ್ಪಳಿಸುವದಿಲ್ಲ…

ನಂಬಿಕೆಯ ಕಂಬಗಳು ಕುಸಿದ ಬಳಿಕ ಮೊದಲಿನಂತೆ ಇರಲು ಆಗುವದೂ ಇಲ್ಲ ಕ್ಷಮಿಸಿ ನಾವೀಗ ಮೊದಲಿನಂತಿಲ್ಲ.

ಬರೀ ನಗುವದನ್ನಷ್ಟೇ ಅಲ್ಲ ಅಳುವದನ್ನೂ ನಿಲ್ಲಿಸಿದ್ದೇವೆ.ಎರಗಿ ಬಂದವರ ಎದೆಗೆ ಒದ್ದು ಕಳಿಸುವ ಚಾಳಿಯನ್ನೂ ಬಿಟ್ಟಿದ್ದೇವೆ
ಬಲಹೀನರಾಗಿದ್ದೇವೆ ಅಂತೆನೂ ಅಲ್ಲ
ಕಲಿತಿದ್ದೇವೆ ಈಗೀಗ ಎಲ್ಲ ಸಮಯದಲ್ಲೂ ಶಾಂತವಾಗಿ ವ್ಯವಹರಿಸುವದನ್ನ.

ಹೇಳುವನ್ನು ನಿಲ್ಲಿಸಿದ್ದೇವೆ ನಾವು ಬುದ್ದಿಯ ಮಾತುಗಳನ್ನ ಯಾರೂ ಏನನ್ನೂ ಕೇಳುವದಿಲ್ಲ
ಬುದ್ದಿ ಮಾತಷ್ಟೇ ಅಲ್ಲ ಯಾರೂ ಕೇಳುವದಿಲ್ಲ ನಮ್ಮದಲ್ಲದ ತಪ್ಪುಗಳಿಗೆ ನಾವು ಕೊಡುವ ವಿವರಣೆಯನ್ನ.

ಅಂತಹವರಿಗೆ ಹೇಳುವದನ್ನು ನಿಲ್ಲಿಸಿದ್ದೇವೆ ನಾವು ಬದುಕಿನ ರೀತಿ ರಿವಾಜುಗಳನ್ನ
ಎಲ್ಲರೂ ಬದುಕುತ್ತಿದ್ದಾರೆ ತಮ್ಮ ಇಷ್ಟದ ಬದುಕಿನ ರೀತಿಯನ್ನ.

ಹೇಳುವದನ್ನು ನಿಲ್ಲಿಸಿದ್ದೇವೆ ನಾವು ಕರುಣೆ,ದಯೆ,ದಾಕ್ಷಿಣ್ಯದ ಮಾತುಗಳನ್ನ
ಯಾಕೆಂದರೆ ಎಲ್ಲರೂ ತುಳಿಯುತ್ತಿದ್ದಾರೆ ತಮಗೆ ಸರಿ ಅನ್ನಿಸಿದ ತಪ್ಪು ದಾರಿಯನ್ನ.

ತೋರಿಸುವದು ನಿಲ್ಲಿಸಿದ್ದೇವೆ ಅವರಿಗೆ ನಮ್ಮ ಎದೆಯೊಳಗಿನ ಪ್ರೀತಿಯನ್ನ ಆಡುವದು ನಿಲ್ಲಿಸಿದ್ದೇವೆ ಮನದೊಳಗಿನ ಮಾತುಗಳನ್ನ…

ಎಲ್ಲರೂ ಪ್ರೀತಿಸುತ್ತಿದ್ದಾರೆ ತಮಗಿಷ್ಟವಾದ ವ್ಯಕ್ತಿಯನ್ನ ಎಲ್ಲರ ಎದುರೇ ಆಡುತ್ತಿದ್ದಾರೆ ನಮ್ಮ ಬಗ್ಗೆ ಅವರ ಮನದೊಳಗಿನ ಮಾತುಗಳನ್ನ…

ದುಃಖಿಸುವದನ್ನೂ ನಿಲ್ಲಿಸಿದ್ದೇವೆ ಈಗೀಗ
ಕಣ್ಣ ನೀರೂ ಬತ್ತಿ ಹೋಗಿವೆ ಅತ್ತು-ಅಲವತ್ತುಕೊಂಡೇ ಕಂಡವರ ಎದುರು ಮನದಾಳದ ನೋವುಗಳನ್ನ

ಅವರ ಹೃದಯ ಕಲ್ಲಾಗಿರಬಹುದು
ನಮ್ಮದೂ ಈಗೀಗ ಹೂವಾಗಿ ಉಳಿದಿಲ್ಲ ಒರೆಸುವದು ನಿಲ್ಲಿಸಿದ್ದಾರೆ ಅವರು ಮತ್ತೊಬ್ಬರ ಕಣ್ಣ ಹನಿಗಳನ್ನ
ಜಾರಿಸಿಯೇ ಸುಖಿಸುತ್ತಾರೆ ಈಗೀಗ ಜೊತೆಗಿದ್ದವರ ಕಣ್ಣೀರ ಧಾರೆಯನ್ನ.

ನಾವು ಈಗೀಗ ನಮ್ಮ ವ್ಯಥೆಯನ್ನೂ ಯಾರ ಎದುರು ಹೇಳುವದಿಲ್ಲ
ಯಾಕೆಂದರೆ ಕಲಿತು ಬಿಟ್ಟಿದ್ದಾರೆ ಅವರು ಅದಕ್ಕೂ ಬಣ್ಣ ಬಣ್ಣದ ಕತೆಗಳ ಕಟ್ಟುವದನ್ನ.

ನಡೆದ ಹಾದಿಯಲ್ಲಿ ಎಲ್ಲ ಬರೀ ಹೂವ ಹಾದಿಯನ್ನಷ್ಟೇ ಕ್ರಮಿಸಿದವರಲ್ಲ ನಾವು ತುಳಿದು ರೂಢಿಯಿದೆ ನಮಗೆ ಕಲ್ಲು-ಮುಳ್ಳಿನ ಹಾದಿಗಳನ್ನ..

ಅಚ್ಚರಿ ಏನೂ ಇಲ್ಲ
ನೋಡಿದ್ದೆವೆ ನಾವು ಹಾರ ತುರಾಯಿ
ಹಾಕಿ ಚಪ್ಪಾಳೆ ತಟ್ಟಿದ್ದ ಜನರೇ
ನಮ್ಮತ್ತ ಚಪ್ಪಲಿಗಳ ಎಸೆದಿರುವದನ್ನ…

ಮೌನಿಯಾಗಿದ್ದೇವೆ ನಾವೀಗ ಮೊದಲಿನಂತೆ ಮಾತನಾಡುವದೂ ಇಲ್ಲ.ಕಲಿತಿದ್ದಾರೆ ಅವರು ಮಾತಿನಲ್ಲೂ ಈಗೀಗ ಖಡ್ಗ ಝಳಪಿಸುವದನ್ನ..

ಈಗೀಗ ಅವರ ಕಣ್ಣ ಎದುರಿಗಿದ್ದರೂ
ಅಂದಾಜಿಸುವದಿಲ್ಲ ನಮ್ಮನ್ನ
ಬೇಜಾರೆನಿಲ್ಲ ಬಿಡಿ ನಮಗೆ
ಖುಷಿ ಇದೆ ಅಷ್ಟೇ…

ಕಲಿತಿದ್ದಾರೆ ಅವರು ಅವಶ್ಯಕತೆ ಇದ್ದಾಗಲಾದರೂ ನಮ್ಮನ್ನು ಬಂದು ಅಪ್ಪುವದನ್ನ ನಾವಂತೂ ಮರೆತಿಲ್ಲ ಮೊದಲಿನಂತೆ ನಿಸ್ವಾರ್ಥದ ಅಪ್ಪುಗೆಯನ್ನ ನಮ್ಮ ನಿಸ್ವಾರ್ಥದ ಅಪ್ಪುಗೆಯನ್ನ

ಬರಹ: ದೀಪಕ ಶಿಂಧೇ

            ಪ್ರಜಾ ಟಿವಿ ವರದಿಗಾರರು

            ಚಿಕ್ಕೋಡಿ