ಆಶಾ ಎಂಬ ಹೆಣ್ಣು ಮಕ್ಕಳ ಕನಸುಗಳು ಕಮರುವ ಮುನ್ನ…..!

ಆಶಾ ಕಾರ್ಯಕರ್ತೆಯರ ಸಾಂದರ್ಭಿಕ ಚಿತ್ರ

“ನೋಡ ಲಕ್ಷ್ಮಿ ಕೆಲಸ ಭಾಳ ಆತು ನೀ ಬರೆ ಊರು ಊರು ಓಣಿ ಓಣಿ ತಿರುಗಿದ್ರ ಮನಿ ಯಾರ್ ನೊಡ್ಕೊಳ್ಳೋರು ದಿನಾ ನಿನ್ನ ಗುಲಾಬಿ ಸೀರಿ ನೋಡಿ ನೋಡಿ ಸಾಕಾಗೇತಿ,ನೀ ತರು ನಾಲ್ಕ ಸಾವಿರದಾಗ ಮನಿ ನಡಿಯುದು ಅಷ್ಟಕ್ಕ ಅಷ್ಟೇ ಐತಿ ರಾತ್ರಿ ಅನ್ನಂಗಿಲ್ಲ ಹಗಲು ಅನ್ನಂಗಿಲ್ಲ ಕೆಲಸ ಮಾಡಾಕ ನೀ ಎನ್ ಮದರ ಥೆರೆಸಾ ಅಲ್ಲ ಸಾಕು ನಾಳೆಯಿಂದ ಬರಂಗಿಲ್ಲ ಅಂತ ಹೇಳಿ ಕೆಲಸಾ ಬಿಟ್ಟ ಬಿಡು….ಅಂತ ರಾಮಪ್ಪ ಬಾಯಿ ಜೋರು ಮಾಡುತ್ತಿದ್ದರೆ ಗುಲಾಬಿ ಸೀರೆ ಉಟ್ಟ ಹೆಣ್ಣುಮಗಳು ಲಕ್ಷ್ಮಿ ಇದಾವುದೂ ಕೇಳಿಸದವರ ಹಾಗೆ ಮನೆಯ ಹೊರಗೆ ಬಿಟ್ಟಿದ್ದ ಚಪ್ಪಲಿ ತೊಟ್ಟು ಆಸ್ಪತ್ರೆ ಕಡೆಗೆ ಹೆಜ್ಜೆ ಹಾಕತೊಡಗಿದ್ದಳು…”

“ಅಯ್ಯೋ ಅದೇನ್ ಗೋಳು ಅಂತಿರಾ ರಾಜಧಾನಿ ಎಕ್ಸಪ್ರೆಸ್ಸು,ರಾಣಿ ಚೆನ್ನಮ್ಮ ಟ್ರೈನು,ಆಟೋರಿಕ್ಷಾ, ಬಸ್ಸು ಎಲ್ಲಾಕಡೆ ಇವತ್ತು ಗುಲಾಬಿ ಸೀರೆದೆ ಭರಾಟೆ…ಸರ್ಕಾರ ಕೊಡಲ್ಲ ಇವರು ಬಿಡಲ್ಲ ನಾಲ್ಕು ವರ್ಷದಿಂದ ಮತ್ತೊಂದು ಸೀರೆನು ಕೊಟ್ಟಿಲ್ಲ ಅಷ್ಟೆ ಯಾಕೆ ಮೂರು ತಿಂಗಳಿಂದ ಗೌರವ ಧನನೂ ಕೊಟ್ಟಿಲ್ಲ ಆದ್ರೂ ಬರ್ತಾರೆ ಎನ್ ಮಾಡೋದು ಎಲ್ಲಾ ನಮ್ ಕರ್ಮ”…. ಅಂತ ಯಾರೋ ಒಬ್ಬ ಕಾರ್ಪೊರೇಟ್ ಕಂಪನಿಯ ಉದ್ಯೋಗಿ ವಟಗುಟ್ಟತೊಡಗಿದ್ದ ಅರೇ ಹೌದಲ್ಲವಾ???
ಕೊಡುವ ಸಂಬಳಕ್ಕಿಂತ ಹೆಚ್ಚು ಜವಾಬ್ದಾರಿಗಳನ್ನು ನೀಡಿ ದುಡಿಸಿಕೊಳ್ಳುವ ಸರ್ಕಾರ ತನ್ನ ಜವಾಬ್ದಾರಿಯನ್ನೆ ಮರೆಯುತ್ತ ಇರುವದರಿಂದಾಗಿ ಸದ್ಯ ಗುಲಾಬಿ ಈ ಸೀರೆಗಳ ಸಂಖ್ಯೆಯೂ ನಿಧಾನಕ್ಕೆ ಕಡಿಮೆಯಾಗತೊಡಗಿದೆ.

ರಾಜ್ಯದಲ್ಲಿ ಸದ್ಯ ನಲವತ್ತಾರು ಸಾವಿರ ಮಹಿಳಾ ಸಹಾಯಕಿಯರನ್ನ ಅವರ ಗುಲಾಬಿ ಸೀರೆ ನೋಡಿ ಆಶಾ ಅಂತ ಕರೆಯುವ ಹಾಗೆ ಅವರ ಕಾರ್ಯ ಚಟುವಟಿಕೆ ಇದ್ದರೂ ಕೂಡ ಆಳುವ ಸರ್ಕಾರದ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಅನ್ನುವ ಪರಿಪಾಠದಿಂದಾಗಿ ಆರೋಗ್ಯ ಇಲಾಖೆಯಲ್ಲಿ ಸರ್ಕಾರಿ ಸ್ಟಾಫ್ ನರ್ಸಗಳಿಗಿಂತ ಹೆಚ್ಚು ಕೆಲಸ ಮಾಡಿದರೂ ಕೂಡ ಕಡೆಗಣಿಸಲ್ಪಡುತ್ತಿರುವ ಒಂದು ವರ್ಗದ ಬಗ್ಗೆ ಇಂದು ಮಾತನಾಡಬೇಕಿದೆ. ಕೇವಲ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಆಧಾರದಲ್ಲಿ ಸೇವಾ ಮನೋಭಾವನೆಯಿಂದ ಕರ್ತವ್ಯ ನೀರ್ವಹಿಸುತ್ತಿರುವ ರಾಜ್ಯದ ಆಶಾ ಎಂಬ ಮಹಿಳಾ ಸಹಾಯಕಿಯರ ಸಂಕಷ್ಟದ ಬಗ್ಗೆ ಒಂದು ಪುಟ್ಟ ಕಣ್ಣ ನೋಟವನ್ನ ಹರಿಸುವ ಪ್ರಯತ್ನ ನನ್ನದು.

ಒಬ್ಬ ಮಹಿಳೆ ಗರ್ಭಿಣಿ ಎಂದು ತಿಳಿದಾಗಿನಿಂದ ಅವಳ ಹೆರಿಗೆಯಾಗಿ ಮಗು ಒಂದು ವರ್ಷದ್ದಾಗಿ ಬೆಳೆದು ಆರೋಗ್ಯಕರವಾಗಿ ಇರುವತನಕ ಎಲ್ಲವನ್ನೂ ಅಚ್ಚು ಕಟ್ಟಾಗಿ ನೋಡಿಕೊಳ್ಳುವ ಮನೆಯ ಮಗಳಂತೆ ಗರ್ಭಿಣಿ ಸ್ತ್ರೀಯರಿಗೆ ಆರೈಕೆ ಮಾಡುವ ಹೆಣ್ಣುಮಕ್ಕಳೇ ಈ ಆಶಾಗಳು.

ಗುಲಾಬಿ ಬಣ್ಣದ ಸೀರೆ ನೋಡಿದ ತಕ್ಷಣ ಅಸಡ್ಡೆಯಿಂದ ನೋಡುವ ಜನರ ನಡುವೆಯೇ ದಯೆ ಮತ್ತು ದಾಕ್ಷಿಣ್ಯದಿಂದ ಹೆರಿಗೆ ನೋವಿನಿಂದ ನರಳುವ ಹೆಣ್ಣುಮಕ್ಕಳಿಗೆ ಅವಳ ತಾಯಿ ಅಥವಾ ಸಹೋದರಿಯಾಗಿ ಜೊತೆಗೆ ನಿಂತು ಸ್ಕ್ಯಾನಿಂಗ್ ಇಂದ ಹಿಡಿದು ಗರ್ಭದಲ್ಲಿ ಮಗುವಿನ ಬೆಳವಣಿಗೆಯ ಚಿಕಿತ್ಸೆ ಕೊಡಿಸುವತನಕ, ಹೆರಿಗೆಯ ಬಳಿಕವೂ ತಾಯಿ ಮತ್ತು ಮಗು ಆರೋಗ್ಯವಾಗಿ ಇರಲು ಬೇಕಾದ ಜಾಗ್ರತೆ ವಹಿಸುವಂತ ತಾಯಿ ಕರುಳಿನ ಹೆಣ್ಣುಮಕ್ಕಳೇ ಈ ಆಶಾಗಳು.

ಬಹಳಷ್ಟು ಸಲ ಅಪರಾತ್ರಿಗಳಲ್ಲಿ ತೋಟದ ಮನೆಗಳ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ರಾತ್ರಿ ಹಗಲೆನ್ನದೆ ಸಮಯವನ್ನೂ ಲೆಕ್ಕಿಸದೆ ದೂರದ ಹಾದಿಯಲ್ಲಿ ಯಾರದೊ ಬೈಕಿನಿಂದ ಲಿಪ್ಟ ಪಡೆದು ಬಂದು ಸುರಕ್ಷಿತ ಹೆರಿಗೆ ಆಗುವಂತೆ ದೇವರಲ್ಲಿ ಪ್ರಾರ್ಥಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವವರೆಗೆ ಏನೂ ಅಗಲ್ಲ ಎನ್ನುತ್ತ ಧೈರ್ಯ ತುಂಬುವ ಇಂತಹ ಹೆಣ್ಣು ಮಕ್ಕಳ ಬದುಕು ಮಾತ್ರ ಆರಕ್ಕೆ ಏರದೆ ಮೂರಕ್ಕೆ ಇಳಿಯುವಂತಾಗಿರುವದು ದುರಂತವೆ ಸರಿ.

ಗ್ರಾಮೀಣ ಭಾಗದಲ್ಲಿ ಒಂದು ಸಾವಿರ ಜನಸಂಖ್ಯೆಗೆ ಒಬ್ಬರು ಮತ್ತು ನಗರ ಪ್ರದೇಶಗಳಲ್ಲಿ ಸಾವಿರದ ಎಂಟುನೂರು ಜನರಿಗೆ ಒಬ್ಬರಂತೆ ನಾಲ್ಕು ಸಾವಿರ ಗೌರವ ಧನದ ಆಧಾರದಲ್ಲಿ ನೇಮಕವಾದ ಬಹುತೇಕ ಆಶಾಗಳು ಸೇವಾ ಆಕಾಂಕ್ಷೆ ಹೊತ್ತು ಕೊಂಡೆ ಬಂದವರು ಅಷ್ಟೇ ಅಲ್ಲದೆ ಬಡ ಮತ್ತು ಮಧ್ಯಮವರ್ಗದ ಮನೆಗಳ ಹೆಣ್ಣುಮಕ್ಕಳು ಅನ್ನೋದು ನಿಮಗೆಲ್ಲ ಗೊತ್ತಿರಲಿ.

ಆಶಾ ಸುಪರ್ ವೈಜರಗಳು ಪಿಯುಸಿ ಕಲಿತು ಆರು ಸಾವಿರ ಗೌರವ ಧನ ಪಡೆದುಕೊಂಡರೆ ಇತ್ತ ಎಸ್ ಎಸ್ ಎಲ್ ಸಿ ಬಳಿಕ ಮುಂದೆ ಓದಲು ಆಗದ ಬಹುತೇಕ ಆಶಾಗಳಿಗೆ ಸಿಗುತ್ತಿರುವದು ನಾಲ್ಕು ಸಾವಿರದ ಗೌರವ ಧನವಷ್ಟೇ.

ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲಿ ಪಾಜಿಟಿವ್ ಬಂದವರ ಸರ್ವೆ ಮಾಡುವದರಿಂದ ಹಿಡಿದು ವ್ಯಾಕ್ಸಿನ ಪಡೆಯುವಂತೆ ಗ್ರಾಮೀಣ ಭಾಗದ ಜನರ ಮನವೋಲಿಸುವಲ್ಲಿ, ಪಾಜಿಟಿವ್ ಬಂದವರನ್ನು ಹೋಮ್ ಕ್ವಾರಂಟೈನ್ ಮಾಡಿಸುವಲ್ಲಿ,ಅಷ್ಟೇ ಅಲ್ಲದೆ ಕೋವಿಡ್ ಸಮಯದಲ್ಲಿ ಸ್ವತಃ ಅನಾರೋಗ್ಯಕ್ಕೆ ಈಡಾದವರ ಸಂಭಂದಿಗಳೆ ಆಸ್ಪತ್ರೆಗಳತ್ತ ಸುಳಿಯದೆ ಇರುವಾಗಲೂ ಕೂಡ ಬಾಣಂತಿ ಮತ್ತು ಮಕ್ಕಳ ಆರೈಕೆಯ ಜೊತೆಗೆ ಸುರಕ್ಷಿತ ಹೆರಿಗೆ ಮಾಡಿಸುವ ಸಮಯದಲ್ಲಿ ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಆಸ್ಪತ್ರೆಗಳಿಗೆ ಬಂದು ದುಡಿದ ಆಶಾಗಳು ಇಂದಿಗೂ ಪಡೆಯುತ್ತಿರುವದು ಒಂದಂಕಿ ಸಂಬಳವಷ್ಟೇ..

ಸರ್ಕಾರ ಮಾತ್ರ ಈ ಮಹಿಳೆಯರ ಮೇಲಿನ ಜವಾಬ್ದಾರಿ ಗಳನ್ನ ಹೆಚ್ಚಿಸುತ್ತ ಹೋಗುತ್ತಿದ್ದು ಯಾವ ಸೇವಾ ಭದ್ರತೆಯನ್ನಾಗಲಿ,ನೌಕರಿ ಖಾಯಮ್ಮಾತಿ ಮಾಡುವದಾಗಲಿ,
ಸಮಾನ ಕೆಲಸಕ್ಕೆ ಸಮಾನ ವೇತನ ಕೊಡುವದಾಗಲಿ ಹೋಗಲಿ ಬಿಡಿ ಗೌರವ ಧನವನ್ನು ಇನ್ನಷ್ಟು ಹೆಚ್ಚಿಸುವದಾಗಲಿ ಮಾಡದೆ ಇರುವದು ಸದ್ಯ ಆಶಾಗಳ ಬದುಕಿನ ಆಸೆಗಳನ್ನೆ ಕಮರಿಸುತ್ತಿದೆ.

ಒಂದು ಛತ್ರಿ ಒಂದು ಬ್ಯಾಗ್ ಕೂಡ ಇಲ್ಲದೆ ಬಿಸಿಲು ಮಳೆ ಎನ್ನದೆ ನಡೆದುಕೊಂಡೆ ಕಿಲೋಮೀಟರ ಗಳನ್ನು ಕ್ರಮಿಸಿ ಮದುವೆಯಾದ ನವದಂಪತಿಗಳಿಂದ ಹಿಡಿದು ಯುವ ಜೋಡಿಗಳಿಗೆ ಫ್ಯಾಮಿಲಿ ಪ್ಲಾನಿಂಗ್,ಮಗುವಿನ ಆರೈಕೆ,ಒಂದು ಹೆರಿಗೆಯಿಂದ ಇನ್ನೊಂದು ಹೆರಿಗೆಯ ನಡುವೆ ಇರಬೇಕಾದ ಅಂತರವನ್ನು ತಿಳಿಸುವದರ ಜೊತೆಗೆ ಮಕ್ಕಳು ಮತ್ತು ಮಹಿಳೆಯರಲ್ಲಿ ರಕ್ತ ಹೀನತೆ ಕಾಡದಂತೆ ಐರನ್ ಮಾತ್ರೆಗಳನ್ನ ಒದಗಿಸಿ ಅವರು ಆ ಮಾತ್ರೆ ಮತ್ತು ಟಾನಿಕ್ ಗಳನ್ನು ತಪ್ಪಿಸದೆ ತೆಗೆದುಕೊಳ್ಳುವಂತೆ ನೋಡಿಕೊಳ್ಳುವ,ಕ್ಷಯ ರೋಗಿಗಳ ಗಣತಿ ಮಾಡುವದರ ಜೊತೆಗೆ ಅವರ ಸ್ಯಾಂಪಲ್ ಗಳನ್ನ ಪ್ರಾಥಮಿಕ ಆರೊಗ್ಯ ಕೇಂದ್ರ ಮತ್ತು ಸಾರ್ವಜನಿಕ ಆಸ್ಪತ್ರೆ ಗಳ ಲ್ಯಾಬ್ ತಲುಪಿಸುವ ಹಾಗೂ ಚಿಕಿತ್ಸೆ ಕೊಡಿಸುವ, ಪಲ್ಸ ಪೋಲಿಯೋ ಜಾಗೃತಿ ಹಾಗೂ ಲೈಂಗಿಕ ಸಂಪರ್ಕ ದಲ್ಲಿ ತಗುಲುವ ಸೊಂಕುಗಳ ಕುರಿತು,ಮುಟ್ಟಿನ ಸಮಯದಲ್ಲಿ ಋತು ಚಕ್ರದಿಂದ ಆಗುವ ದೈಹಿಕ ಬದಲಾವಣೆಗಳ ಬಗ್ಗೆ ಹದಿಹರೆಯದ ಮಕ್ಕಳಲ್ಲಿ ದೈಹಿಕ ಸ್ವಚ್ಚತೆಯ ಜಾಗೃತಿ ಮೂಡಿಸುವ,ಮತ್ತು ಮನೆ ಮನೆಗೆ ಅಲೆದು ಜನನ ಮರಣಗಳನ್ನು ದಾಖಲಿಸುವ,ಕೆಲಸಗಳೆಲ್ಲ ಇದೇ ಆಶಾಗಳ ಹೆಗಲು ಏರಿದೆ.

ಹೀಗೆ ಹಲವಾರು ಜವಾಬ್ದಾರಿ ಹೊತ್ತ ಗುಲಾಬಿ ಸೀರೆಯ ಮಹಿಳೆಯರಿಗೆ ಅವರ ದುಡಿಮೆಗೆ ತಕ್ಕಷ್ಟು ಗೌರವಧನ ಮಾತ್ರ ಇಂದಿಗೂ ಸಿಗುತ್ತಿಲ್ಲ.ಕಡೆಯ ಪಕ್ಷ ಅವರಿಗೆ ಸಿಗಬೇಕಾದ ಒಂದಷ್ಟು ಗೌರವ ಮತ್ತು ಪ್ರೀತಿ ವಿಶ್ವಾಸಗಳಾದರೂ ನಮ್ಮಿಂದ ಅವರಿಗೆ ಸಿಗುವಂತಾಗಲಿ.ರಾಜ್ಯದ ಮೂಲೆ ಮೂಲೆಯಿಂದ ಬೆಂಗಳೂರಿನ ರೈಲು ಮತ್ತು ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಫ್ರೀಡಮ್ ಪಾರ್ಕ ಹತ್ತಿರ ಸಾಂಕೇತಿಕ ಪ್ರತಿಭಟನೆ ನಡೆಸಿ ಇಂದಲ್ಲ ನಾಳೆಗೆ ಎಲ್ಲವೂ ಸರಿಹೋದಿತು ಎಂಬ ಆಸೆಗಳ ಮೂಟೆ ಹೊತ್ತು ತಮ್ಮ ತುತ್ತಿನ ಚೀಲ ತುಂಬಿಸಲು ಜೋರಾದ ಧ್ವನಿಯೂ ಹೊಮ್ಮದೆ ಕಂಗಾಲಾಗುತ್ತಿರುವ ಗುಲಾಬಿ ಸೀರೆಯ ಆಶಾಗಳ ಕೂಗಿನ ಜೊತೆಗೆ ನಮ್ಮ ಧ್ವನಿಯೂ ಸೇರುವಂತಾಗಲಿ.

ಆಶಾಗಳ ಆಸೆಗಳು ಕಮರುವ ಮುನ್ನ ನಮ್ಮನ್ನು ಆಳುವ ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಯೋಚಿಸಿ ಒಂದು ಒಳ್ಳೆಯ ನಿರ್ಧಾರಕ್ಕೆ ಬರಲಿ ಅನ್ನುವ ಆಶಯದೊಂದಿಗೆ
ನಿಮ್ಮ

ವರದಿ: ದೀಪಕ ಶಿಂಧೇ
           ಮುಕ್ತ ನ್ಯೂಸ್ ಕನ್ನಡ

           9482766018