1,4 ಬಿಲಿಯನ್ ಜನಸಂಖ್ಯೆ ಇರುವ ಭಾರತ ಇದು ವರೆಗೂ ನಡೆದ ಒಲಂಪಿಕ್ ಪಂದ್ಯಾವಳಿಗಳಲ್ಲಿ 36 ಪದಕಗಳನ್ನು ಪಡೆದಿದೆ: ಭಾರತ ಏಕೆ ಹೆಚ್ಚು ಪದಕ ಪಡೆಯಲು ವಿಫಲವಾಗಿದೆ ಕಾರಣ ಇಲ್ಲಿವೆ.

“ ಅಯ್ಯೋ ನಂಗೆ ಗೊತ್ತಿತ್ತು ಅವರು ಪದಕ ಗೆಲ್ಲುವುದಿಲ್ಲ ಅಂತ ಅಪಶಕುನದ ಮಾತುಗಳಾಡುವ ಮುನ್ನ ಈ ಲೇಖನ ಒಂದು ಸಾರಿ ಓದಿ ”

ಏ ಶಬ್ಬಾಶ್….ಹೋಗ್ ಹೋಗ್….ಏ ಹಿಡಿ ಕ್ಯಾಚ್ ಹಾಕ್….ಕ್ಯಾಚ್ ಹಾಕ್… ಜಂಪ್ ಜಂಪ್…. ಏ ನಾರ‌್ಯಾ ಓಡ್ ಮಗನ…ಓಡ್ ಜೋರ್…. ಹಿಂಗ…. ಪ್ರ‌್ಯಾಕ್ಟಿಸ್ ಮಾಡಿದಿ ಅಂದ್ರ ಓಲಂಪಿಕ್ ಹೋಗ್ತಿಯೋ ಮಗನ….ಅಲ್ಲಿ ಚಿನ್ನ ಬೆಳ್ಳಿ ಪದಕ ತಂದಾಗ ನನ್ನ ಮರಿಬ್ಯಾಡ ನೋಡು…. ಅನ್ನುತ್ತ ವಿಷಲ್ ಹಾಕುತ್ತ ಶಾಲೆಯ ಗ್ರೌಂಡ್ ಒಂದರಲ್ಲಿ ಮಕ್ಕಳಿಗೆ ಖೋಖೋ, ಕಬಡ್ಡಿ, ಮತ್ತು ರಿಲೇ, ರನ್ನಿಂಗ್,  ತರಬೇತಿ ನೀಡುತ್ತಿದ್ದ ಲಮಾಣಿ ಸರ್ ಕೆಲ ವರ್ಷಗಳ ಹಿಂದಷ್ಟೇ ರಿಟೈರಮೆಂಟ್ ಹತ್ತಿರಕ್ಕೆ ಬಂದಿದ್ದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ಇರುವ ಮೀಸಲಾತಿ ಅಡಿಯಲ್ಲಿ ಅವರದ್ದೇ ಒಂದಷ್ಟು ವಿದ್ಯಾರ್ಥಿಗಳು ಪೋಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಆಯ್ಕೆ ಆಗಿ ಸೇವೆ ಸಲ್ಲಿಸುತ್ತಿದ್ದರೆ ಕ್ರೀಡಾಕ್ಷೇತ್ರದಲ್ಲಿ ಬಡ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಾಗ ಒಂದಷ್ಟು ಕ್ರೀಡಾ ಉಪಕರಣ ಖರೀದಿಸಲು ತಮ್ಮದೇ ಸಂಬಳದ ಒಂದು ಭಾಗವನ್ನು ಪ್ರತಿ ತಿಂಗಳು ವ್ಯಯಿಸುತ್ತಿದ್ದ ಲಮಾಣಿ ಮಾಸ್ತರ ಈಗೀಗ ನಿರಾಸೆಯಿಂದ ಪೆಚ್ಚು ಮುಖ ಮಾಡಿಕೊಂಡು  ಕೊರಳಲ್ಲಿ ಮ್ಯಾಚಿಂಗ್ ದಾರಕ್ಕೆ ಜೋತು ಬಿದ್ದ ಹಿತ್ತಾಳೆಯ ವಿಷಲ್ ಊದುವದನ್ನೇ ನಿಲ್ಲಿಸಿ ಬಿಟ್ಟಿದ್ದರು.
ಎಷ್ಟೋ ವರ್ಷಗಳ ಕಾಲ ಹೋಮ ಹವನದಂತೆ ಮಾಡಿದ ಕಠೀಣಾತಿ ಕಠೀಣ ತಯಾರಿಗಳೂ ಕೂಡ ಕೆಲವೊಮ್ಮೆ ಕೆಲಸಕ್ಕೆ ಬರದಂತಾಗಿ ಯಾವ ಪದಕವೂ ತಮ್ಮ ಮಡಿಲಿಗೆ ಬರದೇ ಬರಿ ಗೈಯ್ಯಲ್ಲೇ ಬರುವ ಅದೆಷ್ಟೋ ಕ್ರೀಡಾಪಟುಗಳ ಬದುಕು ಅಷ್ಟೇನೂ ಸ್ಥಿತಿವಂತಿಕೆಯಿಂದ ಕೂಡಿರುವದಿಲ್ಲ ಅನ್ನುವದು ಒಂದು ಕಡೆ ಆದರೆ ಸಾಮಾನ್ಯ ಆಟೋ ಚಾಲಕ,ಕೂಲಿ ಕಾರ್ಮಿಕ,ರೈಲ್ವೇ ಸ್ಟೇಷನ್ ಹಮಾಲಿ,ಮತ್ತು ರೈತರ ಮಕ್ಕಳು ಬಹುತೇಕ ಆಸಕ್ತಿಯಿಂದ ಆಯ್ಕೆ ಮಾಡಿಕೊಳ್ಳುವ ಕ್ರೀಡಾಕ್ಷೇತ್ರದಲ್ಲಿ ಬಹಳಷ್ಟು ಸಲ ಪ್ರತಿಭೆಗಳು ಅವಕಾಶ ವಂಚಿತರಾಗಿ ಉಳಿಯುವದು, ಪ್ರೋತ್ಸಾಹದ ಕೊರತೆಯಿಂದ ಅನ್ನುವದರಲ್ಲಿ ಎರಡು ಮಾತಿಲ್ಲ.
ಒಬ್ಬ ವ್ಯಕ್ತಿ ಗೆದ್ದಾಗ ಎಲ್ಲರೂ ಇವ ನಮ್ಮವ,ನಮ್ಮ ದೇಶದವ, ನಮ್ಮದೇ ರಾಜ್ಯ,ನಮ್ಮ ಊರಿನ ಹುಡುಗ ಅಂತೆಲ್ಲ ಹೆಮ್ಮೆಯಿಂದ ಬೀಗಿದರೂ ಕೂಡ ಒಂದೊಮ್ಮೆ ಸೋತರೆ ನಿನ್ನಿಂದ ಏನಾಗುತ್ತೆ ಕತ್ತೆ ಕಾಯೋಕೆ ಲಾಯಕ್ಕು ಅಂತ ಹೀಯಾಳಿಸುವದರಿಂದ ಹಿಡಿದು ಸೋತ ಕ್ರೀಡಾಪಟುವಿಗೆ ರಂಗ ತಾಲೀಮಿನ ಮತ್ತೊಂದು ಅವಕಾಶವನ್ನೇ ಕೊಡದೆ ಕ್ರೀಡಾಕ್ಷೆತ್ರದಲ್ಲಿ ಅವರನ್ನು ವೈಯಕ್ತಿಕ ಕಾರಣಗಳಿಂದಲೂ ಅವಮಾನ ಮಾಡುವವರೇ ತುಂಬಿರುವ ದುರ್ಬೀಕ್ಷ ಕಾಲವಿದು.


ಹತ್ತಾರು ವರ್ಷಗಳ ಶ್ರಮ,ಸತತ ಪ್ರಯತ್ನ ನಿರಂತರವಾದ ಪ್ರಯತ್ನ ಎಲ್ಲವನ್ನೂ ನಿರ್ಲಕ್ಷ್ಯ ಮಾಡಿ ಕ್ರೀಡಾಪಟುವೊಬ್ಬ ಸೋತಾಗ ಹತಾಸೆಯಿಂದ ಮಾತನಾಡುವ ನಾವುಗಳು ಮೊದಲು ನಮ್ಮ ಹಳ್ಳಿಗಳಲ್ಲಿ ಮಕ್ಕಳಿಗೆ ಆಟವಾಡಲು ಒಂದು ಸುಸಜ್ಜಿತ ಕ್ರೀಡಾಂಗಣ ಇದೆಯಾ? ತರಬೇತಿ ಕೊಡಲು ಒಬ್ಬ ಅನುಭವಿ ಮತ್ತು ನುರಿತ ಶಿಕ್ಷಕರು ನಮ್ಮ ಶಾಲೆಗಳಲ್ಲಿ ಇದ್ದಾರಾ? ಕ್ರೀಡಾಕೂಟಗಳಿಗೆ ಭಾಗವಹಿಸಲು ತೆರಳುವ ನಮ್ಮ ಹೆಣ್ಣುಮಕ್ಕಳು ಅಲ್ಲಿ ನಿಜಕ್ಕೂ ಸುರಕ್ಷಿತರಾ? ಅವರಿಗೆ ಗುಣಮಟ್ಟದ ಕ್ರೀಡಾ ಸಲಕರಣೆಗಳ ಪೂರೈಕೆ ಆಗುತ್ತಿದೆಯಾ? ಅನ್ನುವದರತ್ತ ಗಮನಹರಿಸುವದೇ ಇಲ್ಲ ಅನ್ನುವದು ದುರಂತವೇ ಸರಿ.
ಅದಕ್ಕೂ ದೊಡ್ಡ ದುರಂತವೆಂದರೆ ವಿದೇಶಗಳಲ್ಲಿ ಈಜು,ಶೂಟಿಂಗ್, ರನ್ನಿಂಗ್,ಆರ್ಚರಿ ಅಂತಹ ವೈಯುಕ್ತಿಕ ಕ್ರೀಡೆಗೆ ಸಿಗುವ ಪ್ರೋತ್ಸಾಹ ಮತ್ತು ನೈತಿಕ ಬೆಂಬಲ ನಮ್ಮ ದೇಶದ ಕ್ರೀಡಾಪಟುಗಳಿಗೆ ಸಿಗದೇ ಇರುವದು ಇಂದಿಗೂ ಬುದಿಯಾನಂತಹ  ಒಬ್ಬ ಸ್ಲಂ ನಲ್ಲಿ ಬೆಳೆದ ಓಟಗಾರ  ಹಿಂದೆಯೇ ಉಳಿದು ಹೋಗಿರುವದರಿಂದ ಹಿಡಿದು ಬುಡಕಟ್ಟು ಜನಾಂಗ,ಹಿಂದುಳಿದ ವರ್ಗಗಳ ಕ್ರೀಡಾಪಟುಗಳು ಸಾಧನೆಯ ಕನಸು ಕಾಣುತ್ತ ತಮ್ಮ ಇಡೀ ಬದುಕನ್ನೇ ಸವೆಸುತ್ತಿದ್ದರೂ ಕೂಡ….

ಒಲಂಪಿಕ್ ನಲ್ಲಿ ಅತೀ ಹೆಚ್ಚು ಪದಕಗಳನ್ನು ಪಡೆದ ದೇಶಗಳು


ಭಾರತದದ ಜನಸಂಖ್ಯೆ 1.4 ಬಿಲಿಯನ್ ಇದ್ದರೂ ಕೂಡ್ ನಮಗೆ ಇದುವರೆಗೂ ನಡೆದ ಒಲಂಪಿಕ್ ಪಂದ್ಯಾವಳಿಯಲ್ಲಿ ಲಭಿಸಿದ ಪದಕಗಳು ಮಾತ್ರ ಕೇವಲ 36.
ಕೇವಲ 34,ಕೋಟಿ 19 ಲಕ್ಷ,73,ಸಾವಿರದ 508 ಜನಸಂಖ್ಯೆ ಹೊಂದಿರುವ ಅಮೆರಿಕ (USA) ದೇಶವು ಕಳೆದ 2020 ರ ಟೋಕಿಯೋ ಒಲಂಪಿಕ್ ಪಂದ್ಯಾವಳಿಯಲ್ಲಿ 113 ಪದಕಗಳನ್ನು ಗೆದ್ದಿದೆ.ಇಲ್ಲಿಯವರೆಗೆ ಅಮೇರಿಕ (USA) 816 ರಷ್ಯಾ 559 ಚೀನಾ 535,ಜರ್ಮನಿ-414ಗ್ರೇಟ್ ಬ್ರಿಟನ್ 321,ಪ್ರಾನ್ಸ್-299,ಹೀಗೆ ವಿವಿಧ ದೇಶಗಳು ನೂರಾರು ಚಿನ್ನ,ಬೆಳ್ಳಿ,ಕಂಚಿನ  ಪದಕಗಳನ್ನು ತಮ್ಮದಾಗಿಸಿಕೊಂಡು ಬೀಗಿವೆ.

ಟೀಕಿಸುವ್ ಮನೋಭಾವ


ಒಲಂಪಿಕ್ಸ್ ಶೂಟಿಂಗ್ ನಲ್ಲಿ ಚಿನ್ನ ಗೆಲ್ಲಲಿಲ್ಲ ಅಂತ ಈಗಷ್ಟೇ ನಮ್ಮ ದೇಶದ ಮಹಿಳಾ ಕ್ರೀಡಾಪಟುವೊಬ್ಬರ ಬಗ್ಗೆ ಕಟು ಟೀಕೆಗಳು ಕೇಳಿಬಂದವು. ನೀನು ನಾಲಾಯಕ್ ಅನ್ನುವ ರೀತಿ ಮಾತನಾಡಿದ್ದು ನೋಡಿದರೆ ತನ್ನ ಹದಿನೆಂಟು ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ಕ್ರೀಡೆಯತ್ತ ಪರಿಶ್ರಮ ಹಾಕುತ್ತಿರುವ ಆ ಹೆಣ್ಣುಮಗಳಿಗೆ ಆಗುತ್ತಿರುವ ಮಾನಸಿಕ ಯಾತನೆ ಎಂತಹದ್ದಿರಬೇಕು ಅನ್ನುವ ಪರಿಜ್ಞಾನವೂ ಇಲ್ಲದ ರಣಹೇಡಿಗಳ ಮಾತು ಯಾಕೋ ಸೂಪ್ತ ಮನಸ್ಸುಗಳ ವೀಕೃತಿ ಅನ್ನಿಸದೇ ಇದರದು. ಇಷ್ಟಕ್ಕೂ ಸೋಲು ಮತ್ತು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸುವ ಮನೋಭಾವ ನಮ್ಮ ಜನರಲ್ಲಿ ಕುಂಠಿತವಾಗುತ್ತಿದೆ ಅನ್ನುವದಕ್ಕೆ ಇದಕ್ಕಿಂತ ಬೇರೆ ಯಾವ ಸಾಕ್ಷಿಯೂ ಬೇಕಿಲ್ಲ ಬಿಡಿ.

ಕುಂಠಿತಗೊಂಡ ಖೇಲೋ ಇಂಡಿಯಾ ಯೋಜನೆ


ಅಂದ ಹಾಗೆ ನಮ್ಮ ಭವ್ಯಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಕ್ರೀಡಾ ಸಚಿವರಾದ ವಿಜಯ್ ಗೋಯಲ್ ಮತ್ತು ರಾಜವರ್ಧನ್ ಸಿಂಗ್ ರಾಥೋರ್ ಇವರ ಉದ್ಘಾಟಿಸಿದ “ಖೇಲೋ ಇಂಡಿಯಾ” ಯೋಜನೇ 2017-18 ರಲ್ಲಿ ಆರಂಭವಾಯಿತು. ಇದರಿಂದ ಮುಂಬರುವ ಒಲಂಪಿಕ್ ಕ್ರೀಡಾಕೂಟಗಳಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಗೊಳಿಸಿದ ಕೇಂದ್ರ ಸರ್ಕಾರ. ಆದರೆ ಇದರಲ್ಲೂ ಕೂಡ ಸರಿಯಾದ ಆಯ್ಕೆ ಪ್ರಕ್ರಿಯೆ ನಡೆಯದೆ ಈ ಯೋಜನೆಯೂ ಕೂಡ ಕುಂಠಿತಗೊಂಡಿದೆ.
ಅಲ್ಲದೇ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪ್ರತಿ ಜಿಲ್ಲೆಯ ಯುವಜನ ಕ್ರೀಡಾ ಇಲಾಖೆಯಲ್ಲಿ ತರಬೇತುದರಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ರೀಡಾ ತರಬೇತುದಾರ ಮತ್ತ ನೌಕರರ ಕೊರತೆ ಹಾಗೂ ಸರಿಯಾಗಿ ಸಂಬಳ ಸಿಗದೇ ನೌಕರಿಯಲ್ಲಿ ಖಾಯಮಾತಿಯೂ ಆಗದೆ ಇರುವುದು ಕೂಡ ಓಲಂಪಿಕ್ ಅಂತಹ ಕ್ರೀಡೆಗೆ ಸಿದ್ದವಾಗಬೇಕಾದ ಕ್ರೀಡಾಪಟುಗಳನ್ನು ರೂಪಿಸುವಲ್ಲಿ ಆಗುತ್ತಿರುವ ಹಿನ್ನಡೆ ಎನ್ನಬಹುದು.
ಇಷ್ಟೇ ಸಾಲದು ಎಂಬಂತೆ ಕ್ರೀಡಾ ಅಸೋಸಿಯೇಷನ ಗಳಲ್ಲಿ ನಡೆಯುವ ಒಳ ತಿಕ್ಕಾಟ, ಅಧಿಕಾರಕ್ಕಾಗಿ ನಡೆಯುವ ಜಟಾಪಟಿ,ನಾನು ಆಯ್ಕೆ ಮಾಡಿದ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ಅನ್ನುವ ಅಹಂಕಾರ, ಒಂದೊಂದು ಕ್ರೀಡೆಯ ಕ್ರೀಡಾಪಟುಗಳ ತಯಾರಿಗಾಗಿ ಎರಡು-ಮೂರು ಅಸೋಸಿಯೇಷನ್ಗಳು ಹುಟ್ಟಿಕೊಂಡಿರುವುದು, ಕೂಡ ಕ್ರೀಡೆಯ  ಕ್ರೀಡಾಪಟುಗಳ ಸಶಕ್ತಿಕರಣ ಕುಂಟಿತವಾಗುವದಕ್ಕೆ ಕಾರಣವಾಗಿದೆ.

ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ ಪ್ರತಿಭಟನೆ ನಡೆಸಿದಾಗ ಪೊಲೀಸರು ಬಂಧಿಸಿದ ದೃಶ್ಯ


ದೆಹಲಿಯಲ್ಲಿ ಒಲಿಂಪಿಕ್ ವಿಜೇತ ಮಹಿಳಾ ಕುಸ್ತಿ ಕ್ರೀಡಾಪಟುಗಳು ಕುಸ್ತಿ ಸಂಸ್ಥೆಯ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಬೀದಿಯಲ್ಲಿ ಪ್ರತಿಭಟನೆ  ಹೋರಾಟ ನಡೆಸಿ, ಪದಕಗಳನ್ನು ಮರಳಿಸಲು ಮುಂದಾದರೂ ಕೂಡ ಸರಿಯಾದ ನ್ಯಾಯ ಸಿಗದೇ ಇರುವುದು ನೋಡಿದರೆ ನಮ್ಮ ದೇಶದಲ್ಲಿ ಕ್ರೀಡಾಪಟುಗಳಿಗೆ ಯಾವ ರೀತಿ ಪ್ರೋತ್ಸಾಹ ಸಿಗುತ್ತಿದೆ ಅನ್ನುವ ಪ್ರಶ್ನೆ ಉದ್ಭವಿಸದೇ ಇರದು.

ದೈಹಿಕ ಶಿಕ್ಷಕರಾಗ ಬಯಸುವರು ಕಡ್ಡಾಯವಾಗಿ ಯಾವುದಾದರು ಒಂದು ಕ್ರೀಡೆಯಲ್ಲಿ ಸಾಧನೆ ಗೈದಿರಬೇಕು.


ಇತ್ತೀಚೆಗೆ ಶಾಲೆಗಳಲ್ಲಿ P,E ಪಿರಿಯಡ್ ಅನ್ನೋದು ಮರೀಚಿಕೆ ಆದಂತಿದೆ.ದೃಷ್ಟಿ ಹಾಯಿಸಿ ನೋಡಿದರೆ ಕೆಲವು ಶಾಲೆಗಳಲ್ಲಿ ದೈಹಿಕ ಶಿಕ್ಷಕರೇ ಇರುವುದಿಲ್ಲ. ಅನ್ನುವದು ಒಂದು ಕಡೆ ಆದರೆ ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ ಕೇವಲ ಪರೀಕ್ಷಾ ಅಂಕ ಪಟ್ಟಿಯ ಅಂಕಗಳ ಆಧಾರದಲ್ಲಿ ಮೆರಿಟ್ ನಲ್ಲಿ ಪಾಸಾದ ಅಭ್ಯರ್ಥಿಗಳನ್ನು ಮಾತ್ರ ದೈಹಿಕ ಶಿಕ್ಷಕರನಾಗಿ ನೇಮಿಸುತ್ತಾರೆ ಆದರೆ ದೈಹಿಕ ಶಿಕ್ಷಕನಾದವನು ಯಾವುದೇ ಒಂದು ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆಯನ್ನು ಮಾಡಿದವರಾಗಿರಬೇಕು.
ಅಂತಹವರಿಗೆ ಮಾತ್ರ ಸರಕಾರ ದೈಹಿಕ ಶಿಕ್ಷಕ ಹುದ್ದೆಗೆ ಆಯ್ಕೆ ಮಾಡಬೇಕು ಅಂದಾಗ ಮಾತ್ರ ಭಾರತದಲ್ಲಿ ಮುಂಬರುವ ದಿನಗಳಲ್ಲಿ ಒಲಂಪಿಕ್ ನಂತಹ ಕ್ರೀಡೆಗಳಲ್ಲಿ ಹಳ್ಳಿಯಿಂದ ದಿಲ್ಲಿಗೆ ಹೋದ ನಮ್ಮ ಊರಿನ,ನಮ್ಮದೇ ವಠಾರದ,ನಮ್ಮದೆ ಗಲ್ಲಿಯ ಅಥವಾ ನಮ್ಮದೇ ಮನೆಯ ಮಕ್ಕಳು ಕೂಡ ಚಿನ್ನ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಅನಾಯಾಸವಾಗಿ  ಪಡೆಯಬಹುದು ಅಲ್ಲವಾ??